ಹುಬ್ಬಳ್ಳಿ: ‘ಹುಬ್ಬಳ್ಳಿ ಎಂದರೆ ಯಾವಾಗಲೂ ನನಗೆ ಅಚ್ಚುಮೆಚ್ಚು. ಈ ಊರಿನ ಜೊತೆಗೆ ತುಂಬಾ ನೆನಪುಗಳಿವೆ. ಯಾವುದೇ ಸಿನಿಮಾ ಆಗಲಿ ಸೋಲು; ಗೆಲುವಿನ ಫಲಿತಾಂಶಕ್ಕಿಂತ ಆತ್ಮತೃಪ್ತಿಯಾಗುವಂತೆ ಕೆಲಸ ಮಾಡುತ್ತೇನೆ’ ಎಂದು ನಿರ್ದೇಶಕ ಪ್ರೇಮ್ ಹೇಳಿದರು.
ನಗರದ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಶನಿವಾರ ತಮ್ಮ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ‘ಊಟಿ, ಮೈಸೂರು, ಲೇಹ್ ಲಡಾಕ್ ಸೇರಿದಂತೆ ಅನೇಕ ಕಡೆ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಾಯಕ ರಾಣಾ ಮತ್ತು ನಾಯಕಿ ರೀಶ್ಮಾನಾಣಯ್ಯ ಇಬ್ಬರಿಗೂ ಇದು ಮೊದಲ ಸಿನಿಮಾ. ರಚಿತಾ ರಾಮ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು, ಹೊಸ ಕಲಾವಿದರಿಗೆ ಹಾಗೂ ಜನರಿಗೆ ಇಷ್ಟವಾಗುವಂತೆ ನಿರ್ದೇಶಿಸಿದ್ದೇನೆ’ ಎಂದರು.
‘ಸಿನಿಮಾದಲ್ಲಿ ಏಳು ಹಾಡುಗಳಿದ್ದು, ಈಗಾಗಲೇ ಅಪಾರ ಜನಮೆಚ್ಚುಗೆ ಗಳಿಸಿವೆ. ಜನ ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೊ ಎನ್ನುವ ಕುತೂಹಲ ನನಗೂ ಇದೆ. 2021ರ ಜ. 21ರಂದು ಸಿನಿಮಾ ಬಿಡುಗಡೆಯಾಗಲಿದೆ’ ಎಂದರು.
ಸಿನಿಮಾ ಹಾಡಿನ ರಿಲಿಕ್ಸ್ ಬರೆದಿರುವ ಗಜೇಂದ್ರಗಡದ ಶರಣಕುಮಾರ ‘ಸಿನಿಮಾದಲ್ಲಿ ಒಂದು ಅವಕಾಶಕ್ಕಾಗಿ ಒಂದೂವರೆ ದಶಕ ಅಲೆದಾಡಿದ್ದಾನೆ. ಎಂದೂ ಅವಕಾಶ ಸಿಗುವುದಿಲ್ಲವೆಂದು ನಿರಾಸೆಗೊಂಡಾಗ ಪ್ರೇಮ್ ಸರ್ ಕೈಹಿಡಿದು ಅವಕಾಶ ಕೊಟ್ಟರು. ಈಗ ಜೀವನ ಸಾರ್ಥಕವೆನಿಸುತ್ತಿದೆ’ ಎಂದು ಭಾವುಕರಾದರು.
ಹಾಸ್ಯ ಕಲಾವಿದ ಸೂರಜ್, ಈ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು ಹಾಗೂ ವಿವಿಧ ಸಿನಿಮಾ ಮಂದಿರಗಳ ಪ್ರಮುಖರು ಪಾಲ್ಗೊಂಡಿದ್ದರು.