Karnataka news paper

‘ದ್ರಾವಿಡ್‌ ಅಪ್ಪಟ ಜಂಟಲ್ಮನ್‌’, ಇದಕ್ಕೆ ಇತ್ತೀಚಿನ ಉದಾಹರಣೆ ಕೊಟ್ಟ ಗಂಗೂಲಿ!


ಹೈಲೈಟ್ಸ್‌:

  • ಭಾರತ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಗೊಂಡಿರುವ ರಾಹುಲ್ ದ್ರಾವಿಡ್‌.
  • ದ್ರಾವಿಡ್‌ ಮಾರ್ಗದರ್ಶನದ ಅಡಿ ಕಿವೀಸ್‌ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ.
  • ನೂತನ ಕೋಚ್‌ ಅವರಲ್ಲಿನ ಸರಳತೆ ಬಗ್ಗೆ ಉದಾಹರಣೆ ಕೊಟ್ಟ ಸೌರವ್‌ ಗಂಗೂಲಿ.

ಹೊಸದಿಲ್ಲಿ: ಕ್ರಿಕೆಟ್‌ ಜಗತ್ತಿನ ದಿಗ್ಗಜರಲ್ಲಿ ಒಬ್ಬರಾಗಿ ಹಲವು ದಾಖಲೆಗಳನ್ನು ಬರೆದಿದ್ದರೂ ಕೂಡ ರಾಹುಲ್‌ ದ್ರಾವಿಡ್‌ ಅತ್ಯಂತ ವಿನಯವಾಗಿ ನಡೆದುಕೊಳ್ಳುವ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಗುಣಗಾನ ಮಾಡಿದ್ದಾರೆ.

ರಾಹುಲ್‌ ದ್ರಾವಿಡ್‌ ಅಪ್ಪಟ ಜಂಟಲ್ಮನ್‌. ಅವರಲ್ಲಿನ ಸರಳತೆ ಮತ್ತು ವಿನಯಕ್ಕೆ ಮನಸೋಲದವರಿಲ್ಲ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಬಾಸ್‌, ‘ದ್ರಾವಿಡ್‌ ಒಬ್ಬ ಜಂಟಲ್ಮನ್‌’ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಒಂದನ್ನು ಹಂಚಿಕೊಂಡಿದ್ದಾರೆ.

ಕಾನ್ಪುರ ಟೆಸ್ಟ್‌ ಪಂದ್ಯದ ವೇಳೆ ಅಭ್ಯಾಸ ಮುಗಿಸಿದ ಬಳಿಕ ಮುಖ್ಯ ಕೋಚ್‌ ಆಗಿದ್ದರೂ ಕೂಡ ತಾವೇ ಖುದ್ದಾಗಿ ಆಟಗಾರರು ಬಳಕೆ ಮಾಡಿದ್ದ ಕೋನ್‌ಗಳು ಮತ್ತು ವಿಕೆಟ್‌ಗಳನ್ನು ತೆಗೆದಿಡುವ ಕೆಲಸ ಮಾಡುತ್ತಿದ್ದರು ಎಂಬ ಸಂಗತಿಯನ್ನು ಸೌರವ್‌ ಬಹಿರಂಗ ಪಡಿಸಿದ್ದಾರೆ. ಇದು ದ್ರಾವಿಡ್‌ ಅವರಲ್ಲಿನ ವಿನಯ ಮತ್ತು ಸರಳತೆಗೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

‘ಮೂಲಭೂತ ಅಂಶಗಳಿಗೆ ಅಂಟಿಕೊಳ್ಳಿ’ ದ್ರಾವಿಡ್‌ ಸಲಹೆ ಸ್ಮರಿಸಿದ ಅಗರ್ವಾಲ್‌!

ಕಾನ್ಪುರದ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೂಲಕ ಭಾರತ ತಂಡದ ಮುಖ್ಯ ಕೋಚ್‌ ಆಗಿ ದ್ರಾವಿಡ್‌ ಕೆಸಲ ಆರಂಭಿಸಿದ್ದರು. ಇದಕ್ಕೂ ಮುನ್ನ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ದ್ರಾವಿಡ್‌ ಬಳಗ ಕಿವೀಸ್‌ ಪಡೆಯನ್ನು 3-0 ಅಂತರದಲ್ಲಿ ಬಗ್ಗುಬಡಿದಿತ್ತು.

“ದ್ರಾವಿಡ್‌ಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಕಾನ್ಪುರ ಟೆಸ್ಟ್‌ ಪಂದ್ಯ ವೇಳೆ ಅಭ್ಯಾಸದ ಮುಗಿದ ಬಳಿಕ ದ್ರಾವಿಡ್‌ ಖುದ್ದಾಗಿ ವಿಕೆಟ್‌ ಮತ್ತು ಕೋನ್‌ಗಳನ್ನು ತೆಗೆದಿಡುತ್ತಿದ್ದರು ಎಂಬುದನ್ನು ಕೇಳಲ್ಪಟ್ಟೆ. ದ್ರಾವಿಡ್‌ ಅವರ ಈ ಕೆಲಸ ಕ್ಯಾಮೆರಾಮನ್‌ಗಳಿಗೆ ಬಹಳಾ ಖುಷಿಕೊಟ್ಟಿರುತ್ತದೆ. ಆದರೆ, ದ್ರಾವಿಡ್‌ ಎಷ್ಟು ಸಭ್ಯ-ಸರಳ ವ್ಯಕ್ತಿ ಎಂಬುದಕ್ಕೆ ಈ ಉದಾಹರಣೆ ಸಾಕು,” ಎಂದು ಗಂಗೂಲಿ ಹೇಳಿದ್ದಾರೆ.

ಇದೇ ವೇಳೆ “ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮೆರೆಯಲು ದ್ರಾವಿಡ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಿಗೆ ನನ್ನಿಂದ ಕೈಲಾದ ಎಲ್ಲಾ ಸಹಾಯ ಮಾಡಲಿದ್ದೇನೆ,” ಎಂದು ಸೌರವ್‌ ಇದೇ ವೇಳೆ ಹೇಳಿಕೆ ನೀಡಿದ್ದಾರೆ.

ಆಫ್ರಿಕಾ ಪ್ರವಾಸ ನಿಮಿತ್ತ ಯುವ ಆಟಗಾರರಿಗೆ ಸಿಹಿ ಸುದ್ದಿ ನೀಡಿದ ದ್ರಾವಿಡ್!

ಡಿ.26ರಿಂದ ದ. ಆಫ್ರಿಕಾ ವಿರುದ್ಧ ‘ಟೆಸ್ಟ್‌’
ಭಾರತ ತಂಡ ಈಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ತಯಾರಿ ನಡೆಸುತ್ತಿದೆ. ಡಿಸೆಂಬರ್‌ 26ರಂದು ಸೆಂಚೂರಿಯನ್‌ನಲ್ಲಿ 3 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಶುರುವಾಗಲಿದ್ದು, ಈ ಸಲುವಾಗಿ ಡಿ.16ರಂದು ಮುಂಬೈನಿಂದ ಹರಿಣಗಳ ನಾಡಿಗೆ ಭಾರತ ತಂಡ ಪ್ರಯಾಣ ಬೆಳೆಸಲಿದೆ. ಇದು ದ್ರಾವಿಡ್‌ ಬಳಗಕ್ಕೆ ಬಹುದೊಡ್ಡ ಸವಾಲಾಗಲಿದೆ.

ಭಾರತ ತಂಡ ಈವರೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ 20 ಟೆಸ್ಟ್‌ ಪಂದ್ಯಗಳನ್ನು ಆಡಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಗೆದ್ದಿದೆ. ಒಮ್ಮೆಯೂ ಹರಿಣಗಳ ನಾಡಲ್ಲಿ ಟೆಸ್ಟ್‌ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. 2007ರಲ್ಲಿ ದ್ರಾವಿಡ್‌ ನಾಯಕತ್ವದ ಭಾರತ ತಂಡ ಮೊತ್ತ ಮೊದಲ ಬಾರಿ ದಕ್ಷಿಣ ಆಫ್ರಿಕಾ ತಂಡವನ್ನು ಅವರದ್ದೇ ಅಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೋಲುಣಿಸಿದ ಸಾಧನೆ ಮಾಡಿತ್ತು. ಈಗ ದ್ರಾವಿಡ್‌ ಮಾರ್ಗದರ್ಶನದ ಅಡಿಯಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲುವನ್ನು ಎದುರು ನೋಡುತ್ತಿದೆ.

‘ಮನಸ್ಥಿತಿ ಅದೇ ರೀತಿ ಇದೆ’ ದ್ರಾವಿಡ್ ಜೊತೆಗಿನ ಕೆಲಸದ ಅನುಭವ ಹಂಚಿಕೊಂಡ ಕೊಹ್ಲಿ!

ಎಬಿ ಡಿ’ವಿಲಿಯರ್ಸ್‌, ಹಶೀಮ್‌ ಆಮ್ಲಾ, ಫಾಫ್‌ ಡು’ಪ್ಲೆಸಿಸ್‌ ಮತ್ತು ಡೇಲ್‌ ಸ್ಟೇನ್‌ ಅವರಂತಹ ದಿಗ್ಗಜರ ನಿರ್ಗಮನದ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮ್ಯಾಚ್‌ ವಿನ್ನರ್‌ಗಳನ್ನು ಕಂಡುಕೊಳ್ಳಲು ವಿಫಲವಾಗಿರುವ ದಕ್ಷಿಣ ಆಫ್ರಿಕಾ ತಂಡ ಕಳೆಗುಂದಿದ್ದು, ಈ ತಂಡದ ಎದುರು ಟೀಮ್ ಇಂಡಿಯಾ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿಯುತ್ತಿದೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ವೇಳಾಪಟ್ಟಿ
ಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌
ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌
ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌



Read more