Personal Finance
ನಾವು 2022 ರ ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಇದೆ. ಈ ನಡುವೆ ಹೊಸ ವರ್ಷದಲ್ಲಿ ಹಲವಾರು ಬದಲಾವಣೆಗಳು ಆಗಲಿದ್ದು, ಈ ಬಗ್ಗೆ ಬ್ಯಾಂಕುಗಳು, ಆಯಾ ಇಲಾಖೆಗಳು, ವಿಭಾಗಳು ಈಗಾಗಲೇ ಘೋಷಣೆಯನ್ನು ಮಾಡಿದೆ. ನೀವು ಈ ವರ್ಷ ಕೊನೆಯಾಗುವುದಕ್ಕೂ ಮುನ್ನವೇ ಮಾಡಬೇಕಾದ ಹಲವು ಕೆಲಸಗಳು ಕೂಡಾ ಇದೆ.
ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಆದ ಲಾಕ್‌ಡೌನ್‌ನಿಂದಾಗಿ ಎಲ್ಲಾ ವಲಯಗಳು ಭಾರೀ ಹೊಡೆತವನ್ನು ಅನುಭವಿಸಿದೆ. ಜನ ಸಾಮಾನ್ಯರ ಜೀವನದ ಮೇಲಂತೂ ಕೊರೊನಾ ವೈರಸ್ ಲಾಕ್‌ಡೌನ್ ತೀವ್ರ ಗಂಭೀರ ಪರಿಣಾಮವನ್ನು ಬೀರಿದೆ. ಕೋವಿಡ್ ನಿರ್ಬಂಧಗಳು ಸಡಿಲಿಕೆ ಆಗುತ್ತಿದ್ದಂತೆ ದೇಶದಲ್ಲಿ ಎಲ್ಲಾ ವಲಯಗಳು ಕೊಂಚ ಸುಧಾರಣೆ ಕಾಣುತ್ತಿದೆ.
ಜಿಎಸ್‌ಟಿ ಏರಿಕೆ: ಪಾದರಕ್ಷೆ, ಬಟ್ಟೆ ಹೊಸ ವರ್ಷದಿಂದ ದುಬಾರಿ!
ಅದರಲ್ಲೂ ಪ್ರಮುಖವಾಗಿ ಮಧ್ಯಮ ವರ್ಗದ ಮೇಲೆ ಈ ಕೊರೊನಾ ವೈರಸ್ ಸೋಂಕು ಹಾಗೂ ಹಣದುಬ್ಬರವು ಹೆಚ್ಚಿನ ಪ್ರಭಾವವನ್ನು ಉಂಟು ಮಾಡಿದೆ. ನಾವು ದಿನ ನಿತ್ಯ ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇಂಧನ ಬೆಲೆ, ಖಾದ್ಯ ತೈಲಗಳ ಬೆಲೆ, ತರಕಾರಿ, ಹಾಲು ಬೆಲೆಗಳು ನಿರಂತರವಾಗಿ ಏರಿಕೆ ಕಾಣುತ್ತಿದೆ. ಈ ನಡುವೆ ನಿಮಗೆ ಇನ್ನೊಂದು ಶಾಕಿಂಗ್ ಸುದ್ದಿ ಇದೆ. ಮುಂದಿನ ವರ್ಷ ಕೆಲವು ವಸ್ತುಗಳು ದುಬಾರಿ ಆಗಲಿದೆ. ಹಾಗಾದರೆ ಯಾವೆಲ್ಲಾ ವಸ್ತುಗಳು ಮುಂದಿನ ವರ್ಷ 2022 ರಲ್ಲಿ ದುಬಾರಿ ಆಗಲಿದೆ ಎಂಬುವುದನ್ನು ತಿಳಿಯಲು ಮುಂದೆ ಓದಿ…

ಆಹಾರ ಪದಾರ್ಥಗಳು ದುಬಾರಿ!
ಹಣದುಬ್ಬರವು ಮುಖ್ಯವಾಗಿ ಆಹಾರದ ಮೇಲೆ ಪ್ರಭಾವವನ್ನು ಬೀರಿದೆ. ಈ ನಡುವೆ ಮುಂದಿನ ವರ್ಷ ಎಲ್ಲಾ ಆಹಾರ ಪದಾರ್ಥಗಳ ಬೆಲೆಯು ಏರಿಕೆ ಆಗಲಿದೆ. ನೀವು ಪ್ರತಿ ದಿನ ಕುಡಿಯುವ ಕಾಫಿಯಿಂದ ಹಿಡಿದು ಎಲ್ಲಾ ತಿಂಡಿಗಳು ದುಬಾರಿ ಆಗಲಿದೆ. ಎಲ್ಲಾ ಆಹಾರಗಳಿಗೆ ಹೆಚ್ಚು ಬೆಲೆಯನ್ನು ವಿಧಿಸಲಾಗುತ್ತದೆ. ಬ್ರೆಡ್, ಪ್ಯಾಕೆಜ್ ಆಹಾರ ಹಾಗೂ ಪಾನೀಯಗಳ ಬೆಲೆಯು ಹೊಸ ವರ್ಷದಲ್ಲಿ ಅಧಿಕವಾಗಲಿದೆ. 2022 ರಲ್ಲಿ ಶೇಕಡ ಐದರಷ್ಟು ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಮುಖ್ಯ ಕಾರಣ, ಇಂಧನ ಬೆಲೆ ಹೆಚ್ಚಳ ಕಾರಣವಾಗಿದೆ. ಇಂಧನ ಬೆಲೆ ಅಧಿಕವಾದಂತೆ ಸರಬರಾಜು ದರವು ಕೂಡಾ ಹೆಚ್ಚಾಗಲಿದೆ. ಇದರಿಂದಾಗಿ ಆಹಾರದ ಬೆಲೆಯು ಕೂಡಾ ಅಧಿಕವಾಗಲಿದೆ. ಇನ್ನು ಆಹಾರ ಪದಾರ್ಥಗಳ ಪೈಕಿ ಮುಖ್ಯವಾಗಿ ಪಾನೀಯಗಳ ದರವು ಅಧಿಕವಾಗುವ ಸಾಧ್ಯತೆ ಇದೆ. ಆಮದು ಮಾಡಿಕೊಂಡ ಪಾನೀಯಗಳ ಬೆಲೆಯು ಗಗನಕ್ಕೆ ಏರಲಿದೆ.
ಟೊಮೆಟೊ, ಹಾಲು ಬೆಲೆ ಏರಿಕೆ: ಮಧ್ಯಮ ವರ್ಗದ ಮೇಲೆ ಹಣದುಬ್ಬರ ಪ್ರಭಾವ ಹೀಗಿದೆ

ಹೊಸ ವರ್ಷದಲ್ಲಿ ವಾಹನಗಳು ಇನ್ನಷ್ಟು ದುಬಾರಿ!
ಕಚ್ಚಾ ಸಾಮಗ್ರಿಗಳು ಸೇರಿದಂತೆ ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದ ಹಿನ್ನೆಲೆಯಲ್ಲಿ ಬೆಲೆ ಮರುಹೊಂದಿಕೆ ಮಾಡಿಕೊಳ್ಳಲು ಮುಂದಾಗಿರುವ ಹಲವಾರು ಆಟೋಮೊಬೈಲ್ ಕಂಪನಿಗಳು ವಾಹಗಳ ಬೆಲೆಯನ್ನು ಹೊಸ ವರ್ಷದಿಂದ ಅಧಿಕ ಮಾಡಲಿದೆ. ಈಗಾಗಲೇ ಹಲವಾರು ಕಂಪನಿಗಳು ಈ ಬಗ್ಗೆ ಹೇಳಿಕೆಯನ್ನು ನೀಡಿದೆ. ಹೊಸ ವರ್ಷದಿಂದ ವಾಹನಗಳ ಬೆಲೆ ಅಧಿಕವಾಗಲಿದೆ ಎಂದು ಕಂಪನಿಗಳು ಹೇಳಿಕೊಂಡಿದೆ. “ವೆಚ್ಚದ ಹೆಚ್ಚಳದ ಕೊಂಚ ಪರಿಣಾಮವು ನಮ್ಮ ಗ್ರಾಹಕರ ಮೇಲೆ ಬೀರಲಿದೆ,” ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟರ್ ಹೇಳಿಕೆಯಲ್ಲಿ ತಿಳಿಸಿದೆ. ”ಇದು ನಮಗೆ ಪರೀಕ್ಷೆಯ ಸಮಯ, ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ನಾವು ಹೆಚ್ಚಿನ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಬಯಸುವುದಿಲ್ಲ, ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಅನಿವಾರ್ಯ” ಎಂದು ಟಿಕೆಎಂ ಹೇಳಿದೆ. ಈಗಾಗಲೇ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹೋಂಡಾ ಕಾರ್ಸ್ ಸೇರಿದಂತೆ ವಿವಿಧ ಕಂಪನಿಗಳು ಮುಂದಿನ ತಿಂಗಳಿನಿಂದ ಬೆಲೆಗಳನ್ನು ಹೆಚ್ಚಿಸುವುದಾಗಿ ಸೂಚಿಸಿವೆ. ಉಕ್ಕು, ತಾಮ್ರ, ಅಲ್ಯೂಮಿನಿಯಂ ಮತ್ತು ಅಮೂಲ್ಯ ಲೋಹಗಳಂತಹ ವಿವಿಧ ಅಗತ್ಯ ವಸ್ತುಗಳ ಬೆಲೆ ಕಳೆದ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ಹೆಚ್ಚಾಗುತ್ತಿದ್ದು ,ಅನೇಕ ಕಂಪನಿಗಳು ಬೆಲೆ ಏರಿಕೆ ಮಾಡುವ ಹಾದಿ ಹಿಡಿದಿವೆ.

ಬಟ್ಟೆ, ಪಾದರಕ್ಷೆಯೂ ಆಗುತ್ತೆ ದುಬಾರಿ!
ಕೇಂದ್ರ ಸರ್ಕಾರವವು ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಅನ್ನು ಅಧಿಕ ಮಾಡಿದ ಕಾರಣದಿಂದಾಗಿ ಜನವರಿ 1, 2022 ರಿಂದ ಬಟ್ಟೆಗಳು ಹಾಗೂ ಪಾದರಕ್ಷೆಗಳು ದುಬಾರಿ ಆಗಲಿದೆ. ಬಟ್ಟೆಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗುತ್ತದೆ. ಜಿಎಸ್‌ಟಿ ಏರಿಕೆಯ ಕಾರಣದಿಂದಾಗಿ ಪಾದರಕ್ಷೆ ಹಾಗೂ ಬಟ್ಟೆಗಳ ಬೆಲೆಯು ಕೂಡಾ ಹೊಸ ವರ್ಷದಿಂದ ಹೆಚ್ಚಳವಾಗಲಿದೆ. ಈ ಏರಿಕೆಯು ಪ್ರಮುಖವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ. ಹತ್ತಿಯ ವಸ್ತುಗಳಿಗೆ ವಿನಾಯತಿ ನೀಡಲಾಗಿದೆ. ಹಾಗಾಗಿ ಹತ್ತಿಯ ಬಟ್ಟೆಗಳ ಬೆಲೆಯಲ್ಲಿ ಯಾವುದೇ ಏರಿಕೆ ಆಗುವ ಸಾಧ್ಯತೆ ಇಲ್ಲ. ಹತ್ತಿಯ ಬಟ್ಟೆಗಳ ಮೇಲಿನ ಜಿಎಸ್‌ಟಿ ಈ ಹಿಂದಿನಂತೆಯೇ ಶೇಕಡ 5 ಆಗಿರುತ್ತದೆ.

ಹಾಗಾದರೆ ಯಾವೆಲ್ಲಾ ವಸ್ತು ಹೊಸ ವರ್ಷದಲ್ಲಿ ಅಗ್ಗ?
ಹೊಸ ವರ್ಷದಲ್ಲಿ ಬೆಲೆ ಏರಿಕೆ ಆಗುವ ಸುದ್ದಿಗಳ ನಡುವೆ ನಿಮಗೆ ಪ್ರಮುಖವಾದ ಸಿಹಿ ಸುದ್ದಿಯೂ ಇದೆ. ಹೌದು ಹೊಸ ವರ್ಷದಲ್ಲಿ ಖಾದ್ಯ ತೈಲಗಳ ಬೆಲೆಯು ಇನ್ನಷ್ಟು ಕಡಿಮೆ ಆಗಲಿದೆ. ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಯು ಬಹಳಷ್ಟು ಇಳಿಕೆ ಆಗಿದೆ. ಈಗಾಗಲೇ ಅಡುಗೆ ಎಣ್ಣೆ ಬೆಲೆಯು ಕೆಜಿಗೆ 8-10 ರೂ. ಇಳಿಕೆ ಆಗಿದೆ. ರಫ್ತು ತೆರಿಗೆಯು ಇಳಿಕೆ ಆದ ಕಾರಣದಿಂದಾಗಿ ತೈಲ ಬೆಲೆಯು ಇಳಿಕೆ ಆಗಿದೆ. ಇನ್ನು ಮುಂಬರುವ ಕೆಲವು ತಿಂಗಳಲ್ಲಿ ಖಾದ್ಯ ತೈಲ ಬೆಲೆಯು ಕೆಜಿಗೆ ಇನ್ನೂ 3-4 ರೂಪಾಯಿ ಇಳಿಕೆ ಆಗುವ ಸಾಧ್ಯತೆ ಇದೆ. ಅಡುಗೆ ಎಣ್ಣೆ ಬೀಜವು ಸ್ಥಳೀಯವಾಗಿ ಅಧಿಕ ಬೆಳೆದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿನ ಕೆಲವು ಬೆಳವಣಿಗೆಯಿಂದಾಗಿ ಅಡುಗೆ ತೈಲ ಬೆಲೆಯು ಇನ್ನೂ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕೈಗಾರಿಕಾ ಸಂಸ್ಥೆ ಎಸ್‌ಇಎ ಹೇಳಿದೆ. ಸೋಯಾಬಿನ್ ಬೆಳೆಯು ಸುಮಾರು 120 ಲಕ್ಷ ಟನ್ ಆಗಿದೆ. ನೆಲಗಡಲೆ ಬೆಳೆಯು 80 ಲಕ್ಷ ಟನ್ ಆಗಿದೆ. ಬೆಳೆಯು ಅಧಿಕವಾದ ಹಿನ್ನೆಲೆಯಿಂದಾಗಿ ಅಡುಗೆ ಎಣ್ಣೆ ಬೆಲೆಯು ಕಡಿಮೆ ಆಗುವ ಸಾಧ್ಯತೆ ಬಗ್ಗೆ ವರದಿ ಆಗಿದೆ.
English summary
Things To Get Costlier In The New Year 2022, Here’s Details
Things To Get Costlier In The New Year 2022, Here’s Details.
Story first published: Tuesday, December 28, 2021, 12:47 [IST]