ಹೈಲೈಟ್ಸ್:
- ಇಂಗ್ಲೆಂಡ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- 3ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಇನಿಂಗ್ಸ್ ಸೋಲು ಅನುಭವಿಸಿದ ಇಂಗ್ಲೆಂಡ್.
- ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಆಷಸ್ ಟ್ರೋಫಿ ಉಳಿಸಿಕೊಂಡ ಆಸ್ಟ್ರೇಲಿಯಾ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಮಂಗಳವಾರ ಆರಂಭವಾದ ಮೂರನೇ ದಿನದಾಟದಲ್ಲಿ ಸ್ಕಾಟ್ ಬೊಲೆಂಡ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 68 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ 0-3 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಆತಿಥೇಯ ತಂಡಕ್ಕೆ ಬಿಟ್ಟುಕೊಟ್ಟಿತು.
ಸಿಡ್ನಿ ಹಾಗೂ ಹೊಬರ್ಟ್ನಲ್ಲಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಗಮನ ಹರಿಸಲಿದೆ. ಅಂದಹಾಗೆ ಇಂಗ್ಲೆಂಡ್ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ಗೆ ಮತ್ತೊಮ್ಮೆ ಮುಖಭಂಗ: ಆಸೀಸ್ ತೆಕ್ಕೆಗೆ ಆಷಸ್ ಟ್ರೋಫಿ!
ಇಂಗ್ಲೆಂಡ್ ತಂಡ ತನ್ನ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ತಪ್ಪು ಮಾಡಿದೆ ಎಂದು ರಿಕಿ ಪಾಂಟಿಂಗ್ 7 ಕ್ರಿಕೆಟ್ಗೆ ತಿಳಿಸಿದ್ದಾರೆ. “ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದಲೇ ಇಂಗ್ಲೆಂಡ್ ತಂಡ ಉತ್ತಮ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ವಿಚಾರದಲ್ಲಿ ತಪ್ಪು ಮಾಡಿದೆ. ಉತ್ತಮ ಪ್ರದರ್ಶನ ತೋರಬೇಕಾದರೆ ನೀವು ಮೊದಲನೇ ಪಂದ್ಯದಿಂದಲೇ ಉತ್ತಮ ತಂಡವನ್ನು ಕಣಕ್ಕೆ ಇಳಿಸಬೇಕಾಗುತ್ತದೆ. ಆದರೆ, ಇಂಗ್ಲೆಂಡ್ ಪಾಲಿಗೆ ಇದು ಸಾಧ್ಯವಾಗಲಿಲ್ಲ. ಅಡಿಲೇಡ್ ಹಾಗೂ ಎಂಸಿಜಿಯಲ್ಲಿಯೂ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ ವಿಭಿನ್ನವಾಗಿತ್ತು,” ಎಂದು ಪಾಂಟಿಂಗ್ ಬೇಸರ ವ್ಯಕ್ತಪಡಿಸಿದರು.
“ಮೊದಲನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಆಡಿಸದೇ ಇರುವುದು ದಿಗ್ಭ್ರಮೆಗೊಳಿಸುವಂತಿತ್ತು. ಬ್ರಿಸ್ಬೇನ್ ಟೆಸ್ಟ್ನಲ್ಲಿ ಜೋ ರೂಟ್ ಬೌಲ್ ಮಾಡದೆ ಇರುವುದು ಕೂಡ ನನ್ನನ್ನು ದಿಗ್ಭ್ರಮೆಗೊಳಿಸಿತ್ತು. ಅಡಿಲೇಡ್ ಟೆಸ್ಟ್ನಲ್ಲಿ ಮಾರ್ಕ್ ವುಡ್ ಆಡದೆ ಇರುವುದು ಕೂಡ ನನಗೆ ದಿಗ್ಭ್ರಮೆ ಮೂಡಿಸಿತು. ಇಂಗ್ಲೆಂಡ್ ತಂಡದ ಎಲ್ಲಾ ಯೋಜನೆ, ಯೋಚನೆ ಹಾಗೂ ಕಾರ್ಯತಂತ್ರ ಸಂಪೂರ್ಣವಾಗಿ ತಪ್ಪಾಗಿದೆ,” ಎಂದು ರಿಕಿ ಪಾಂಟಿಂಗ್ ಹೇಳಿದರು.
ಕೊಹ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆ ಬಹಿರಂಗಪಡಿಸಿದ ಅಗರ್ಕರ್!
ಅಗ್ರ ಕ್ರಮಾಂಕದಲ್ಲಿ ಸಮಸ್ಯೆ ಇದೆ: ಬೋಥಮ್
ಇಂಗ್ಲೆಂಡ್ ತಂಡ ಅತ್ಯುತ್ತಮ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್ಗೆ ಕರೆ ತಂದಿಲ್ಲ ಎಂದು ಮತ್ತೊಬ್ಬ ದಿಗ್ಗಜ ಐಯಾನ್ ಬೋಥಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸಿಬಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡ ಕೆಲ ನಿರ್ಧಾರಗಳಲ್ಲಿ ತರ್ಕವಿಲ್ಲ ಎಂಬುದು ಮಾಜಿ ಆಟಗಾರನ ಅಭಿಪ್ರಾಯ.
“ಇಂಗ್ಲೆಂಡ್ ಪುಟಿದೇಳಲಿದೆಯೇ ಎಂಬದು ನನಗೆ ಗೊತ್ತಿಲ್ಲ. ಆದರೆ ಅವರು ಕಮ್ಬ್ಯಾಮ್ ಮಾಡಬೇಕೆಂದು ನಾನು ಬಯಸುತ್ತೇನೆ. ಪ್ರವಾಸಿ ತಂಡ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಅಂದಹಾಗೆ ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಸಮಸ್ಯೆ ಇದೆ. ಎರಡು ಸಂಯೋಜನೆಯೊಂದಿಗೆ ಅವರು ಪ್ರಯತ್ನಿಸಿದ್ದರು, ಆದರೆ ಇದು ಸಕಾರವಾಗಲಿಲ್ಲ,” ಎಂದು ಬೋಥಮ್ ತಿಳಿಸಿದ್ದಾರೆ.
ಕ್ರಿಕೆಟ್ ಸುದ್ದಿ ‘ನನ್ನ ಅಭಿಪ್ರಾಯಕ್ಕೆ ಅವಕಾಶವಿರಲಿಲ್ಲ’ ಎಲ್ಬಿಡಬ್ಲ್ಯು ಬಗ್ಗೆ ಮಯಾಂಕ್ ಬೇಸರ!
ಇಂಗ್ಲೆಂಡ್ ಪ್ರದರ್ಶನ ಮುಜುಗರ ತಂದಿದೆ: ವಾನ್
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಜೋ ರೂಟ್ ಬಳಗದ ಪ್ರದರ್ಶನವನ್ನು ಟೀಕಿಸಿದ್ದಾರೆ. ಇಂಗ್ಲೆಂಡ್ ತಂಡದ ಪ್ರದರ್ಶನ ಮುಜುಗರ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಇಂಗ್ಲೆಂಡ್ ತಂಡದಲ್ಲಿ ಕೆಲ ದೊಡ್ಡ ಸಮಸ್ಯೆಗಳಿವೆ. ಇದು ನಿಜಕ್ಕೂ ಮುಜುಗರ ತರುವಂತಿದೆ. ಸ್ಪರ್ಧಿಸುವ ಬಗ್ಗೆ ಹೆಮ್ಮೆಪಡುವ ಆಟಗಾರರ ಗುಂಪು ಇಂಗ್ಲೆಂಡ್ ತಂಡದಲ್ಲಿದೆ. ಆದರೆ ಅವರು ಯಾವುದೇ ರೀತಿಯ ಸ್ಥಿರತೆ ಅಥವಾ ಕೌಶಲ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕನಿಷ್ಠ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಅವರಿಂದ ಆಗಲಿಲ್ಲ. ಬ್ರಿಸ್ಬೇನ್ನಲ್ಲಿ ಆರಂಭವಾದ ವೈಫಲ್ಯ, ಮೆಲ್ಬೋರ್ನ್ವರೆಗೂ ಮುಂದುವರಿದಿದೆ,” ಎಂದು ಮೈಕಲ್ ವಾನ್ ಟೀಕಿಸಿದ್ದಾರೆ.