ಹೈಲೈಟ್ಸ್:
- ಪ್ರಧಾನಿ ಮೋದಿ ರಕ್ಷಣೆಗೆ ಮರ್ಸಿಡೆಸ್-ಮೇಬ್ಯಾಚ್ ಎಸ್650 ವಾಹನ ಸೇರ್ಪಡೆ
- 12 ಕೋಟಿ ರೂ ಮೌಲ್ಯದ ಬೆಂಗಾವಲು ವಾಹನದಲ್ಲಿ ಅನೇಕ ಭದ್ರತಾ ಸೌಲಭ್ಯಗಳು
- 2 ಮೀಟರ್ ದೂರದಲ್ಲಿ 15 ಕೆಜಿ ಟಿಎನ್‌ಟಿ ಸ್ಫೋಟ ಸಂಭವಿಸಿದರೂ ರಕ್ಷಣೆ
- ಸ್ಫೋಟದಿಂದ ಕಾಪಾಡಲು ವಾಹನದ ಕೆಳಭಾಗದಲ್ಲಿ ವಿಶೇಷ ಭದ್ರತಾ ತಂತ್ರಜ್ಞಾನ
- ಕಿಟಕಿ ಗಾಜುಗಳಿಗೆ ಪ್ರಬಲ ಗುಂಡು ನಿರೋಧಕ ಅಳವಡಿಕೆ, ಒಳಗೆ ಐಷಾರಾಮಿ ಸೀಟು
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಹೈದರಾಬಾದ್ ಹೌಸ್‌ಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಈ ಹೊಸ ಮರ್ಸಿಡೆಸ್-ಮೇಬ್ಯಾಚ್ ಎಸ್650 ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಅದರ ಬಳಿಕ ಈ ವಾಹನ ಪ್ರಧಾನಿ ಅವರ ಬೆಂಗಾವಲಿನಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಎಸ್650 ಗಾರ್ಡ್ ಬೆಲೆ ಎಷ್ಟು?
ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ ವಿಆರ್10 ಮಟ್ಟದ ರಕ್ಷಣೆಯುಳ್ಳ ಅತ್ಯಾಧುನಿಕ ಸವಲತ್ತುಗಳ ಮಾಡೆಲ್ ಆಗಿದೆ. ಇದು ಕಾರ್ ಒಂದರಲ್ಲಿ ನೀಡುವ ಅತಿ ಹೆಚ್ಚಿನ ರಕ್ಷಣಾ ಸೌಲಭ್ಯವಾಗಿದೆ. ಮರ್ಸಿಡೆಸ್-ಮೇಬ್ಯಾಚ್ ಎಸ್600 ಗಾರ್ಡ್ ವಾಹನವು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿತ್ತು. ಅದಕ್ಕೆ 10.5 ಕೋಟಿ ರೂ ಇತ್ತು. ಮರ್ಸಿಡೆಸ್-ಮೇಬ್ಯಾಚ್ ಎಸ್650 ವಾಹನಕ್ಕೆ ಈಗ 12 ಕೋಟಿ ರೂ.ಗೂ ಅಧಿಕ ಬೆಲೆ ಇದೆ.
ಎಸ್‌ಪಿಜಿಯ ಹೊಣೆಗಾರಿಕೆ
ದೇಶದ ಮುಖ್ಯಸ್ಥರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ), ಸಾಮಾನ್ಯವಾಗಿ ಹೊಸ ಕಾರಿಗೆ ಬೇಡಿಕೆ ಸಲ್ಲಿಸುತ್ತದೆ. ತಾವು ಭದ್ರತೆ ನೀಡುತ್ತಿರುವ ವ್ಯಕ್ತಿಯ ರಕ್ಷಣೆಗೆ ಹೊಸ ವಾಹನದ ಅಗತ್ಯವಿದೆಯೇ ಎಂಬ ಭದ್ರತಾ ಅಗತ್ಯಗಳನ್ನು ಗುರುತಿಸುವ ಮತ್ತು ನಿರ್ಧರಿಸುವ ಕಾರ್ಯವನ್ನು SPG ಮಾಡುತ್ತದೆ. ಬೆಂಗಾವಲಿನಲ್ಲಿ ಡೆಕಾಯ್ ಕಾರುಗಳನ್ನು ಬಳಸುವುದರಿಂದ ಎಸ್‌ಪಿಜಿ ಅದೇ ಮಾದರಿಯ ವಾಹನಕ್ಕೆ ಬೇಡಿಕೆ ಇರಿಸುತ್ತದೆ.
ವಾಹನದ ವಿಶೇಷತೆ ಏನು?
ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ ಬೆಂಗಾವಲು ವಾಹನ 6.0 ಲೀಟರ್ ಅವಳಿ-ಟರ್ಬೋ ವಿ12 ಎಂಜಿನ್ ಹೊಂದಿದ್ದು, ಅದು 516ಬಿಎಚ್‌ಪಿ ಉತ್ಪಾದಿಸುತ್ತದೆ ಮತ್ತು ಅಂದಾಜು 900ಎನ್‌ಎಂ ಪೀಕ್ ಟಾರ್ಕ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಮೀ ಆಗಿದೆ.
ಎಸ್650 ಗಾರ್ಡ್ ಬಾಡಿ ಮತ್ತು ಕಿಟಕಿಗಳು ಪ್ರಬಲವಾದ ಉಕ್ಕಿನ ತಿರುಳಿನ ಬುಲೆಟ್‌ಗಳನ್ನು ಎದುರಿಸಬಲ್ಲಷ್ಟು ಶಕ್ತಿ ಹೊಂದಿವೆ. ಇದು 2010 ಸ್ಫೋಟಕ ನಿರೋಧಕ ವಾಹನ (ಇಆರ್‌ವಿ), Explosion Proof Vehicle ರೇಟಿಂಗ್ ಅನ್ನು ಹೊಂದಿದೆ. ಎಕೆ-47 ರೈಫಲ್‌ಗಳ ದಾಳಿಯನ್ನು ಇದು ತಾಳಿಕೊಳ್ಳಬಲ್ಲದು. ಕೇವಲ 2 ಮೀಟರ್ ದೂರದಿಂದ 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟ ಸಂಭವಿಸಿದರೂ ಅದರಿಂದ ರಕ್ಷಣೆ ಒದಗಿಸುತ್ತದೆ. ಕಿಟಕಿಯ ಒಳ ರಚನೆಯು ಪಾಲಿಕಾರ್ಬೊನೇಟ್ ಲೇಪನ ಹೊಂದಿದೆ. ವಾಹನದ ಕೆಳ ಭಾಗವು ನೇರ ಸ್ಫೋಟದಿಂದ ಒಳಗೆ ಇರುವವರನ್ನು ರಕ್ಷಿಸಲು ಭಾರಿ ಶಸ್ತ್ರಸಜ್ಜಿತವಾಗಿದೆ. ಅನಿಲ ದಾಳಿ ನಡೆದರೆ ಅದರಿಂದ ರಕ್ಷಿಸುವುದಕ್ಕಾಗಿಯೂ ಕ್ಯಾಬಿನ್‌ಗೆ ಪ್ರತ್ಯೇಕ ಗಾಳಿ ಪೂರೈಕೆ ವ್ಯವಸ್ಥೆ ಇದೆ.
ಇಂಧನ ಟ್ಯಾಂಕ್ ರಂಧ್ರವಾಗುವುದಿಲ್ಲ!
Mercedes-Maybach S650 Gaurd ವಾಹನದ ಇಂಧನ ಟ್ಯಾಂಕ್ ವಿಶೇಷ ವಸ್ತುವಿನಿಂದ ಲೇಪಿತವಾಗಿದೆ. ಇದು ಯಾವುದೇ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ತಕ್ಷಣವೇ ಮುಚ್ಚುತ್ತದೆ. ಎಎಚ್-64 ಅಪಾಚೆ ದಾಳಿಕೋರ ಹೆಲಿಕಾಪ್ಟರ್‌ಗಳ ಟ್ಯಾಂಕ್‌ಗಳಲ್ಲಿ ಬೋಯಿಂಗ್ ಸಂಸ್ಥೆ ಬಳಸುವ ಸಾಮಗ್ರಿಗಳಿಂದಲೇ ಇದನ್ನು ಮಾಡಲಾಗಿರುತ್ತದೆ. ಅಲ್ಲದೆ ಈ ಕಾರು, ಟೈರ್‌ಗಳಿಗೆ ಹಾನಿಯಾದರೆ, ಅಥವಾ ಗಾಳಿ ಹೋಗಿ ಪಂಕ್ಚರ್ ಆದರೂ, ತಕ್ಷಣವೇ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ವಿಶೇಷವಾಗಿ ನಿರ್ಮಿಸಿರುವ ಫ್ಲ್ಯಾಟ್ ಟೈರ್‌ಗಳಲ್ಲಿ ಚಲಿಸುವ ಮೂಲಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ಈ ಕಾರಿನಲ್ಲಿ ಐಷಾರಾಮಿ ಒಳಾಂಗಣ ವಿನ್ಯಾಸವಿದೆ. ಇದರಲ್ಲಿ ಸೀಟ್ ಮಸಾಜರ್ ಇದೆ. ಹಿಂಬದಿಯ ಸೀಟುಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ಚಾಚಿಕೊಳ್ಳಲು ಅನುಕೂಲಕರವಾಗುವಂತೆ ಸೀಟುಗಳನ್ನು ಹಿಂದಕ್ಕೆ ಹೊಂದಿಸಿಕೊಳ್ಳಲು ಅವಕಾಶವಿದೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಬಳಸುತ್ತಿದ್ದರು. 2014ರಲ್ಲಿ ಪ್ರಧಾನಿಯಾದಾಗ ಅವರು ಬಿಎಂಡಬ್ಲ್ಯೂ 7 ಸರಣಿಯ ಅಧಿಕ ಭದ್ರತಾ ಆವೃತ್ತಿಯನ್ನು ಬಳಸಿದ್ದರು. ಬಳಿಕ ಲ್ಯಾಂಡ್ ರೋವರ್ ರೇಂಜ್ ವೋಗ್ ಹಾಗೂ ಟೊಯೊಟೊ ಲ್ಯಾಂಡ್ ಕ್ರೂಸರ್ ವಾಹನಗಳನ್ನು ಬಳಸಿದ್ದರು.