Karnataka news paper

ಮದನಿ ವಿರುದ್ಧದ ಸಾಕ್ಷಿಗಳಿಗೆ ಬೆದರಿಕೆ: ಪತ್ರಕರ್ತೆ ಸೇರಿ ಮೂವರ ಅರ್ಜಿ ವಜಾ..!


ಹೈಲೈಟ್ಸ್‌:

  • ಬೆದರಿಕೆ ಆರೋಪಕ್ಕೆ ಕಠಿಣ ಯುಎಪಿಎ ಕಾಯಿದೆ ಹೇರಲಾಗಿದೆ ಎಂದ ಆರೋಪಿಗಳ ಪರ ವಕೀಲರು
  • ಸಕ್ಷಮ ಪ್ರಾಧಿಕಾರದಿಂದ ಆ ಕಾಯಿದೆ ಹೇರಲು ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ ಎಂದು ವಾದಿಸಿದ ವಕೀಲರು
  • ಹಾಗಾಗಿ ಅವರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ಸಂಚುಗಾರ ಎನ್ನಲಾಗಿರುವ ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯೊಡ್ಡಿದ್ದ ಆರೋಪದ ಮೇಲೆ ಕೇರಳದ ಪತ್ರಕರ್ತೆ ಕೆ. ಕೆ. ಶಹೀನಾ ಮತ್ತಿತರ ಮೂವರನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್‌ ನಿರಾಕರಿಸಿದೆ.

ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಫೆಬ್ರುವರಿ 28 ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ. ಕೆ. ಶಹೀನಾ, ಸುಬೇರ ಪಡುಪು ಮತ್ತು ಉಮರ್‌ ಮೌಲ್ವಿ ಸಲ್ಲಿಸಿದ್ದ ಕ್ರಿಮಿನಲ್‌ ರಿವಿಷನ್‌ ಅರ್ಜಿಯನ್ನು ಆಲಿಸಿದ ನ್ಯಾ. ಎನ್‌. ಕೆ. ಸುದೀಂಧ್ರ ರಾವ್‌ ಅವರಿದ್ದ ಏಕಸದಸ್ಯ ಪೀಠ ಇತ್ತೀಚೆಗೆ ಈ ತೀರ್ಪು ನೀಡಿದೆ.

ಮದನಿ ಜೈಲಿನಿಂದ ಆಸ್ಪತ್ರೆಗೆ
ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ, ಅರ್ಜಿದಾರರು ತಾವು ಎತ್ತಿರುವ ಅಂಶಗಳಿಗೆ ಸೂಕ್ತ ಪುರಾವೆಯನ್ನು ಒದಗಿಸಿಲ್ಲ. ಅಲ್ಲದೆ, ಅರ್ಜಿದಾರರು ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದಲ್ಲಿ ಅವಕಾಶವಿದ್ದು, ಅಲ್ಲಿ ಅವರು ತಮ್ಮ ವಾದ, ಸಾಕ್ಷ್ಯಗಳನ್ನು ಮಂಡಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಹೊಡಿದ್ದ ಆರೋಪ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಸಕ್ಷಮ ಪ್ರಾಧಿಕಾರ ಆರೋಪಿಗಳ ವಿರುದ್ಧ ಕಠಿಣ ಯುಎಪಿಎ ಹೇರಲು ವಿವೇಚನೆ ಬಳಸಿಲ್ಲವೆಂದು ಈ ಹಂತದಲ್ಲಿಯೇ ಹೇಳಲಾಗದು. ಜೊತೆಗೆ ಆರೋಪವನ್ನು ಪುಷ್ಠೀಕರಿಸುವ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಒದಗಿಸಿದೆ. ಹಾಗಾಗಿ ಅಧೀನ ನ್ಯಾಯಾಲಯ ನೀಡಿರುವ ಆದೇಶ ಸರಿ ಇದೆ. ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ

ಅರ್ಜಿದಾರರ ಪರ ವಕೀಲರು, ಬೆದರಿಕೆ ಆರೋಪಕ್ಕೆ ಕಠಿಣ ಯುಎಪಿಎ ಕಾಯಿದೆ ಹೇರಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಆ ಕಾಯಿದೆ ಹೇರಲು ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ. ಪ್ರಾಧಿಕಾರ ಕೂಡ ತನ್ನ ವಿವೇಚನೆ ಬಳಕೆ ಮಾಡಿಲ್ಲ. ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಾಗಾಗಿ ಅವರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು.

ಮದನಿ ಮೇಲ್ಮನವಿ: ಬೆಂಗಳೂರಿನ ಕೋರ್ಟ್‌ನಲ್ಲಿ ವಿಚಾರಣೆ
ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌. ಸುಬ್ರಮಣ್ಯ, ವಿಚಾರಣಾ ನ್ಯಾಯಾಲಯ ಈಗಾಗಲೇ ಆರೋಪಿಗಳ ವಿರುದ್ಧ ಯುಎಪಿಎ ಕಾಯಿದೆ ಹೇರಿರುವುದು ಸರಿ ಇದೆ ಎಂದು ಹೇಳಿದೆ ಮತ್ತು ಅದಕ್ಕೆ ಕಾರಣಗಳನ್ನೂ ನೀಡಿದೆ. ಸಕ್ರಮ ಪ್ರಾಧಿಕಾರ ಕೂಡ ತನ್ನ ವಿವೇಚನೆ ಬಳಸಿಯೇ ಯುಎಪಿಎ ಮೀಸಲು ಅನುಮತಿ ನೀಡಿದೆ. ಅರ್ಜಿದಾರರು ತಮ್ಮ ವಾದ, ಸಾಕ್ಷ್ಯ ಏನೇ ಇದ್ದರೂ ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಬಹುದು. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಪ್ರಕರಣದಿಂದ ಕೈ ಬಿಡಬಾರದು ಎಂದು ನ್ಯಾಯಪೀಠವನ್ನು ಕೋರಿದ್ದರು.

ಪ್ರಕರಣದ ಹಿನ್ನೆಲೆ: ತಾನು ತೆಹಲ್ಕಾ ಪತ್ರಕರ್ತೆ ಎಂದು ಹೇಳಿಕೊಂಡು ಕೆ. ಕೆ. ಶಹೀನಾ ಮತ್ತಿತರ ಮೂವರು ಮಡಿಕೇರಿಯಲ್ಲಿ ಯೋಗಾನಂದ್‌ ಮತ್ತು ಕೆ. ಬಿ. ರಫೀಕ್‌ ಅವರನ್ನು ಭೇಟಿ ಮಾಡಿ 2008ರ ಬೆಂಗಳೂರು ಸರಣಿ ಬಾಂಬ್‌ ಸ್ಪೋಟ ಪ್ರಕರಣದ ಬಗ್ಗೆ ವಿಚಾರಿಸಿದ್ದಲ್ಲದೆ, ಕೇರಳದ ಪಿಡಿಪಿ ಸಂಘಟನೆಯ ಮುಖಂಡ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳಬಾರದು, ಹೇಳಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಣ ಬೆದರಿಕೆಯೊಡ್ಡಿದ್ದರು.

ಆ ಕುರಿತು ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಸೋಮವಾರಪೇಟೆ ಮತ್ತು ಸಿದ್ಧಾಪುರ ಠಾಣಾ ಪೊಲೀಸರು ಈ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಕಲಂ 34, 120ಬಿ ಮತ್ತು 506 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967 ಸೆಕ್ಷನ್‌ 22ರಡಿ ಪ್ರಕರಣ ದಾಖಲಿಸಿದ್ದರು. ಮತ್ತು ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿದ್ದರು. ಹಾಗಾಗಿ ಆರೋಪಿಗಳು ತಮ್ಮನ್ನು ಈ ಆರೋಪದಿಂದ ಕೈಬಿಡುವಂತೆ ಕೋರಿದ್ದ ಅರ್ಜಿಯಲ್ಲಿ ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಅವರು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿನ ವಿರುದ್ಧ ಸರಕಾರದ ಅನ್ಯಾಯ ಧೋರಣೆ: ಹುಸೇನ್ ಕೋಡಿಬೆಂಗ್ರೆ



Read more