Karnataka news paper

ದಾವಣಗೆರೆಯಲ್ಲಿ ಗುರುಗಳ ತಲೆಗೆ ಕಸದ ಬುಟ್ಟಿ ಹಾಕಿ ವಿಕೃತಿ; ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು!


ಹೈಲೈಟ್ಸ್‌:

  • ಶಿಕ್ಷಕನ ತಲೆಗೆ ಕಸದ ಬುಟ್ಟಿ ಹಾಕಿ ಪುಂಡಾಟಿಕೆ ನಡೆಸಿದ್ದ ಆರು ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ
  • ‘ಶಾಲಾ ಕೊಠಡಿಯೊಳಗೆ ಗುಟ್ಕಾ ತರುವುದು ಸರಿಯಲ್ಲ’ ಎಂದು ಶಿಕ್ಷಕ ಪ್ರಕಾಶ್ ಬುದ್ಧಿವಾದ ಹೇಳಿದ್ದರು
  • ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಶಿಕ್ಷಕರಿಗೆ ಕೀಟಲೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದರು

ಚನ್ನಗಿರಿ: ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಪ್ರಕಾಶ್ ಭೋಗೆರ್ ಅವರ ತಲೆಗೆ ಕಸದ ಬುಟ್ಟಿ ಹಾಕಿ ಪುಂಡಾಟಿಕೆ ನಡೆಸಿದ್ದ ಆರು ವಿದ್ಯಾರ್ಥಿಗಳು ಶನಿವಾರ ಶಾಲೆಯಲ್ಲಿ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.

‘ಶಾಲಾ ಕೊಠಡಿಯೊಳಗೆ ಗುಟ್ಕಾ ತರುವುದು ಸರಿಯಲ್ಲ’ ಎಂದು ಶಿಕ್ಷಕ ಪ್ರಕಾಶ್, ಡಿಸೆಂಬರ್‌ 3ರಂದು ಬುದ್ಧಿವಾದ ಹೇಳಿದ್ದರು. ಆದರೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಶಿಕ್ಷಕರ ತಲೆ ಮೇಲೆಯೇ ಕಸದ ಬುಟ್ಟಿಯನ್ನು ಹಾಕಿ ಕೀಟಲೆ ಮಾಡಿದ್ದರು. ಅಲ್ಲದೇ ಅವರೆ ಸ್ವತಃ ವಿಡಿಯೋ ಮಾಡಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದರು. ಇದೀಗ ಗ್ರಾಮದ ಮುಖಂಡರು ಹಾಗೂ ಪೋಷಕರ ಸಮ್ಮುಖದಲ್ಲಿ ಪುಂಡ ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆರಗಿ ಕ್ಷಮೆಯಾಚಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಡಿಡಿಪಿಐ ಜಿ.ಆರ್‌. ತಿಪ್ಪೇಶಪ್ಪ ನೇತೃತ್ವದಲ್ಲಿ ಶುಕ್ರವಾರ ಶಾಲೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆಯಿಂದ ಉಚ್ಚಾಟಿಸಬಾರದು ಎಂದು ಪೋಷಕರು ಮನವಿ ಮಾಡಿದ್ದರು. ಹೀಗಾಗಿ ‘ಪೊಲೀಸ್‌ ಠಾಣೆಗೆ ದೂರು ನೀಡಿ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಡಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಚನ್ನಗಿರಿ ಹೈಸ್ಕೂಲ್‌ ಟೀಚರ್ ತಲೆ ಮೇಲೆ ಕಸದ ಬುಟ್ಟಿ..! ವಿದ್ಯಾರ್ಥಿಗಳ ಪುಂಡಾಟಿಕೆಗೆ ಸಾರ್ವಜನಿಕರ ಆಕ್ರೋಶ
ಪುಂಡಾಟಿಕೆ ನಡೆಸಿದ್ದ ವಿದ್ಯಾರ್ಥಿಗಳನ್ನು ಗ್ರಾಮದ ಮುಖಂಡರು ಹಾಗೂ ಪೋಷಕರು ಶನಿವಾರ ಬೆಳಿಗ್ಗೆ ಹಿಂದಿ ಶಿಕ್ಷಕ ಪ್ರಕಾಶ್ ಬೋಗೆರ್ ಅವರ ಬಳಿಗೆ ಕರೆ ತಂದರು. ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮದ ಮುಖಂಡರು, ಕ್ಷಮೆ ಕೋರುವಂತೆ ಸೂಚಿಸಿದರು. ‘ನಾವು ಮಾಡಿದ್ದು ತಪ್ಪು. ನಮ್ಮನ್ನು ಕ್ಷಮಿಸಿ’ ಎಂದು ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೋರಿದರು.
ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕನ ಅದ್ಭುತ ಡ್ಯಾನ್ಸ್‌: ನೃತ್ಯ ಕೌಶಲ್ಯಕ್ಕೆ ಮನಸೋತ ನೆಟ್ಟಿಗರು
ಶಿಕ್ಷಕ ಪ್ರಕಾಶ್ ಭೋಗೆರ್ ಮಾತನಾಡಿ, ‘ವಿದ್ಯಾರ್ಥಿಗಳು ಶಾಲೆಗೆ ಓದುವುದಕ್ಕಾಗಿ ಬರುತ್ತಾರೆ. ಶಾಲೆ ಗುಡಿ ಇದ್ದಂತೆ. ಗುಡಿಯನ್ನು ಅಪವಿತ್ರ ಮಾಡಿದಾಗ ಶಿಕ್ಷಕರು ಬೈಯುವುದು ಸಹಜ. ಇದನ್ನು ಅರಿತುಕೊಳ್ಳದೇ ಹುಡುಗಾಟಿಕೆ ಬುದ್ಧಿಯನ್ನು ಹೊಂದಿರುವ ಈ ವಿದ್ಯಾರ್ಥಿಗಳು ನನಗೆ ಕಿರುಕುಳ ನೀಡಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರ ತಪ್ಪನ್ನು ಮನ್ನಿಸಿದ್ದೇನೆ. ಮುಂದೆ ಇಂತಹ ಘಟನೆಗಳು ನಡೆಯಬಾರದು’ ಎಂದು ಹೇಳಿದರು.



Read more