
ಸಂಗ್ರಹ ಚಿತ್ರ
ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಹದಗೆಟ್ಟಿರುವ ರಸ್ತೆ ಕುರಿತು ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು. ಈ ನಡುವಲ್ಲೇ ಪಾಲಿಕೆ ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಸಿಬ್ಬಂದಿಗಳ ಕೊರತೆ ಕಾರಣ ಎಂದು ಹೇಳಿದ್ದಾರೆ.
ಶೇ.40-50ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದಲೇ ಹಲವು ಕಾಮಗಾರಿ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಸಿಬ್ಬಂದಿಗಳ ಕೊರತೆ ವಿಚಾರವನ್ನು ಬಿಬಿಎಂಪಿಯೊಂದಿಗೆ ಕೆಲಸ ಮಾಡುತ್ತಿರುವ ತಜ್ಞರು ಮತ್ತು ಎನ್‌ಜಿಒಗಳು ಒಪ್ಪಿಕೊಂಡಿದ್ದಾರೆ. ಆದರೆ, ಅವಶ್ಯಕತೆಗಳನ್ನು ನಿರ್ವಹಿಸಲು ಸಿಬ್ಬಂದಿಗಳನ್ನೇಕೆ ನೇಮಕ ಮಾಡಲಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ವಿಶೇಷವಾಗಿ ರಸ್ತೆ ಕೆಲಸ, ಕೆರೆ ಮತ್ತು ಕಸ ನಿರ್ವಹಣೆಗೆ ಗಡುವನ್ನು ಪೂರೈಸಲು ನೇಮಕಾತಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳು ಹೊಂಡ ಗುಂಡಿಗಳಿಂದ ಮುಕ್ತವಾಗಿಲ್ಲ ಏಕೆ?: ಪ್ರಶ್ನೆಗೆ ಕಾರಣ ನೀಡಿ ಉತ್ತರಿಸಿದ ಸಿಎಂ ಬೊಮ್ಮಾಯಿ
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಒಬ್ಬ ಎಂಜಿನಿಯರ್ ನಾಲ್ಕು ಕೆರೆ ಅಥವಾ 3-4 ವಾರ್ಡ್‌ಗಳ ನಿರ್ವಹಣೆ ಮಾಡುತ್ತಿದ್ದಾರೆ. ಒಬ್ಬ ಆರೋಗ್ಯಾಧಿಕಾರಿ 4-5 ವಾರ್ಡ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಒಬ್ಬ ಕೆಎಎಸ್ ಅಥವಾ ಐಎಎಸ್ ಅಧಿಕಾರಿ ಮೂರಕ್ಕಿಂತ ಹೆಚ್ಚು ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ಸರ್ಕಾರ ಕರೆಯುವ ಎಲ್ಲ ಸಭೆಗಳಿಗೂ ಹಾಜರಾಗಬೇಕಿದೆ. ಈ ಎಲ್ಲಾ ಸಭೆಯ ಗಡುವುಗಳೊಂದಿಗೆ, ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವುದರ ಜೊತೆಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದೂ ಕೂಡ ಅಧಿಕಾರಿಗಳಿಗೆ ಒಂದು ಸವಾಲಿನ ಕೆಲಸವಾಗಿದೆ.
ಜನಾಗ್ರಹದ ನಾಗರಿಕ ಸಹಭಾಗಿತ್ವದ ಮುಖ್ಯಸ್ಥ ಶ್ರೀನಿವಾಸ್ ಅಲಿವಿಲ್ಲಿ ಅವರು ಮಾತನಾಡಿ, ಅಖಿಲ ಭಾರತ ನಾಗರಿಕ ಸೇವೆಗಳಂತೆಯೇ,ನಾವು ಮುನ್ಸಿಪಲ್ ಕೇಡರ್ ಅನ್ನು ಹೊಂದಿರಬೇಕು, ಅಲ್ಲಿ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.