ಹೈಲೈಟ್ಸ್:
- ವಿದೇಶಗಳಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಿದರೆ ಅಲ್ಲಿನ ಬಹುಸಂಖ್ಯಾತರು ವಿರೋಧಿಸುತ್ತಾರೆ, ಅಲ್ಪ ಸಂಖ್ಯಾತರು ಸಂತೋಷಪಡುತ್ತಾರೆ.
- ಆದರೆ ಭಾರತದಲ್ಲಿಅದು ಉಲ್ಟಾ ಆಗಿದೆ
- ಇದೇ ಮತಾಂತರ ನಿಷೇಧ ಕಾಯಿದೆಯನ್ನು ಪಾಕಿಸ್ತಾನದಲ್ಲಿ ಜಾರಿಗೊಳಿಸಿದರೆ ಅಲ್ಲಿನ ಅಲ್ಪಸಂಖ್ಯಾತರು ಖುಷಿಪಡುತ್ತಿದ್ದರು
- ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರತಿಪಾದನೆ
ಮೈಸೂರು ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ. ವೆಂಕಟ ಕೃಷ್ಣಯ್ಯ (ತಾತಯ್ಯ) ಜಯಂತ್ಯುತ್ಸವ ಹಾಗೂ ಎಂ. ವೆಂಕಟ ಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ರಿಶ್ಚಿಯನ್ನರು ಹಿಂದೂ ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು. ಈಗ ಕ್ರಿಸ್ತನಿಗೆ ಅಷ್ಟೋತ್ತರ ಶತ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್ ಮುಂದೆ ಗರುಡ ಗಂಬ ಸ್ಥಾಪಿಸಲಾಗುತ್ತಿದೆ. ರಥೋತ್ಸವ, ಉರುಳು ಸೇವೆ ಸೇರಿದಂತೆ ನಾನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೆಲ್ಲ ಗಮನಿಸಿದರೆ ಮುಕ್ಕೋಟಿ ಹಿಂದೂ ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುತ್ತಿದೆ. ಈ ಮೂಲಕ ಅಮಾಯಕರನ್ನು ಕ್ರೈಸ್ತ ಮತಕ್ಕೆ ಆಕರ್ಷಿಸಲಾಗುತ್ತಿದೆ. ಅಲ್ಪ ಸಂಖ್ಯಾತರ ಹೆಸರಿನಲ್ಲಿ ಈ ನಾಡಿನಲ್ಲಿ ಕ್ರಿಪ್ಟೋ ಕ್ರಿಶ್ಚಿಯನ್‌ಗಳು ಸೇರಿಕೊಂಡಿದ್ದಾರೆ. ಅವರು ಮೇಲ್ನೋಟಕ್ಕೆ ಹಿಂದೂಗಳಾಗಿದ್ದು, ಹಿಂದೂಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಆಚರಣೆಗಳನ್ನೆಲ್ಲ ಬಿಟ್ಟು ಚರ್ಚ್‌ಗಳಿಗೆ ಹೋಗುತ್ತಿದ್ದಾರೆ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
‘ವಿದೇಶಗಳಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಿದರೆ ಅಲ್ಲಿನ ಬಹುಸಂಖ್ಯಾತರು ವಿರೋಧಿಸುತ್ತಾರೆ. ಅಲ್ಪ ಸಂಖ್ಯಾತರು ಸಂತೋಷಪಡುತ್ತಾರೆ. ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ಇದೇ ಮತಾಂತರ ನಿಷೇಧ ಕಾಯಿದೆಯನ್ನು ಪಾಕಿಸ್ತಾನದಲ್ಲಿ ಜಾರಿಗೊಳಿಸಿದರೆ ಅಲ್ಲಿನ ಅಲ್ಪಸಂಖ್ಯಾತರು ಖುಷಿಪಡುತ್ತಿದ್ದರು. ಇಲ್ಲಿ ಅಲ್ಪಸಂಖ್ಯಾತರೇ ವಿರೋಧಿಸುತ್ತಿದ್ದಾರೆ. ಇದಕ್ಕೆ ರಾಜಕೀಯದವರು ಹಾಗೂ ಬುದ್ಧಿ ಜೀವಿಗಳು ತುಪ್ಪ ಸುರಿಯುತ್ತಿದ್ದಾರೆ. ಈ ಬಗ್ಗೆ ಯುವಕರು ಎಚ್ಚೆತ್ತುಕೊಳ್ಳಬೇಕು’ ಎಂದರು.
ಕೃಷಿ ಕಾಯಿದೆಗಳನ್ನು ವಿರೋಧಿಸಿ ಒಂದು ವರ್ಷ ಕಾಲ ಪ್ರತಿಭಟನೆ ನಡೆಸಿದ ರೈತರಿಗೆ ಅವರು ಕೂತಲ್ಲಿಗೇ ಫಿಜ್ಜಾ ಸರಬರಾಜು ಆಗುತ್ತಿತ್ತು. ಅಲ್ಲಿ ಮಸಾಜ್ ಮಾಡುವವರು ಬರುತ್ತಿದ್ದರು. ವಿಶಾಲ ರಸ್ತೆಯನ್ನು ತಡೆಗಟ್ಟಿ ಅಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದರು. ಇದಕ್ಕೆಲ್ಲ ಹಣ ಎಲ್ಲಿಂದ ಬಂತು? ಇಂಥವರು ಕಳೆದ ಗಣರಾಜ್ಯೋತ್ಸವದಲ್ಲಿ ಸಮಾವೇಶ ನಡೆಸಿ ಗಲಾಟೆ ನಡೆಸಿದರು. ಅಲ್ಲಿ ಪ್ರಧಾನಿ ಸಿಕ್ಕಿದರೆ ಕೊಲ್ಲುತ್ತಿದ್ದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅನಾಥಾಲಯ ಅಧ್ಯಕ್ಷ ಸಿ. ವಿ. ಗೋಪಿನಾಥ್, ಉಪಾಧ್ಯಕ್ಷ ಎಚ್. ರಾಮಚಂದ್ರ, ಟ್ರಸ್ಟಿಗಳಾದ ವಿ. ನಾಗರಾಜ್, ಎಚ್. ಅಶ್ವಥ್ ನಾರಾಯಣ ಇದ್ದರು. ಈ ಸಂದರ್ಭದಲ್ಲಿ ನಾಣ್ಯ ಶಾಸ್ತ್ರಜ್ಞ ಪ್ರೊ. ಎ. ವಿ. ನರಸಿಂಹಮೂರ್ತಿ ಅವರಿಗೆ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.