Karnataka news paper

ಚಂಡೀಗಢ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಎಎಪಿ, ಬಿಜೆಪಿಗೆ ಮುಖಭಂಗ


ಹೈಲೈಟ್ಸ್‌:

  • ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಎಎಪಿ
  • ಭರ್ಜರಿ ಪ್ರದರ್ಶನ ನೀಡಿದ್ದಲ್ಲದೆ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದ ಆಮ್‌ ಆದ್ಮಿ ಪಕ್ಷ
  • ಪಂಜಾಬ್ ವಿಧಾನಸಭೆ ಚುನಾವಣೆಗೂ ಮೊದಲ ಸಿಕ್ಕ ಅಭೂತಪೂರ್ವ ಭರ್ಜರಿ ಗೆಲುವನ್ನು ‘ಟ್ರೇಲರ್’ ಎಂದು ಕರೆದ ಎಎಪಿ

ಚಂಡೀಗಢ: ಪಂಜಾಬ್ ಚುನಾವಣೆಗೆ ಮೊದಲು ನಡೆದ ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಭರ್ಜರಿ ಪ್ರದರ್ಶನ ನೀಡಿದೆ. ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸಿದ್ದು, ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ತನ್ನ ಉತ್ಸಾಹ ಇಮ್ಮಡಿಸಿಕೊಂಡಿದೆ.

ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದಲ್ಲದೆ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಮೊದಲು ಸಿಕ್ಕಿರುವ ಈ ಭರ್ಜರಿ ಗೆಲುವನ್ನು ಎಎಪಿ ‘ಟ್ರೇಲರ್’ ಎಂದು ಕರೆದಿದೆ.

ಮಹಾನಗರ ಪಾಲಿಕೆಯ 35 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆಡಳಿತರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು 12 ಸ್ಥಾನಗಳಲ್ಲಷ್ಟೇ ಗೆಲುವಿನ ನಗೆ ಬೀರುವಲ್ಲಿ ಸಫಲವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ 8 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಅಕಾಲಿ ದಳ ಕೇವಲ 1 ಸ್ಥಾನ ಪಡೆದುಕೊಂಡಿದೆ.

ಎಎಪಿಗೆ ಆಘಾತ ನೀಡಿದ ಕಾಂಗ್ರೆಸ್‌, ಗೃಹ ಬಳಕೆ ವಿದ್ಯುತ್‌ ದರ 3 ರೂ. ಇಳಿಸಿದ ಪಂಜಾಬ್‌ ಸರಕಾರ!
ಪಂಜಾಬ್‌ ಮತ್ತು ಹರ್ಯಾಣದ ರಾಜಧಾನಿಯಾಗಿರುವ ಚಂಡೀಗಢ ಮಹಾನಗರ ಪಾಲಿಕೆಗೆ ಶುಕ್ರವಾರ ಮತದಾನ ನಡೆದಿತ್ತು. ಸೋಮವಾರ ಮತ ಎಣಿಕೆ ನಡೆದಿದ್ದು ಎಎಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

“ಚಂಡೀಗಢ ಚುನಾವಣೆ ಟ್ರೇಲರ್, ಪಂಜಾಬ್ ವಿಧಾನಸಭೆ ಚುನಾವಣೆಯ ಪೂರ್ಣ ಚಿತ್ರವಾಗಿರಲಿದೆ. ಚಂಡೀಗಢದ ಮನಸ್ಥಿತಿ ಪಂಜಾಬ್‌ನಲ್ಲಿಯೂ ಇದೆ. ಎಲ್ಲರೂ ಎಎಪಿಗೆ ಮತ ಹಾಕುತ್ತಿದ್ದಾರೆ. ಜನರು ಅರವಿಂದ್ ಕೇಜ್ರಿವಾಲ್‌ಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ ಎಂಬುದನ್ನು ಆರಂಭಿಕ ಪ್ರವೃತ್ತಿಗಳು ಸಾಬೀತುಪಡಿಸುತ್ತಿವೆ,” ಎಂದು ಎಎಪಿಯ ರಾಘವ್‌ ಛಡ್ಡಾ ಹೇಳಿದ್ದಾರೆ.

ಬಿಜೆಪಿ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದು, ಸ್ವತಃ ಮೇಯರ್ ರವಿಕಾಂತ್ ಶರ್ಮಾ ಮತ್ತು ಮಾಜಿ ಮೇಯರ್ ದವೇಶ್ ಮೌದ್ಗಿಲ್ ಇಬ್ಬರೂ ಸೋಲು ಕಂಡಿದ್ದಾರೆ. ಇವರಿಬ್ಬರನ್ನೂ ಎಎಪಿ ಅಭ್ಯರ್ಥಿಗಳು ಸೋಲಿಸಿದ್ದಾರೆ. ಆದರೆ ಎಎಪಿಯ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥ ಚಂದರ್ ಮುಖಿ ಶರ್ಮಾ ಕೂಡ ಸೋತಿರುವುದು ವಿಶೇಷ.

“ಬಿಜೆಪಿಯ ಮತದಾರರು ತಮ್ಮ ನಿಷ್ಠೆಯನ್ನು ಎಂದಿಗೂ ಬದಲಾಯಿಸದ ಕಾರಣ ಯಾವ ಪಕ್ಷದ ಮತಗಳು ಎಎಪಿಗೆ ಬದಲಾಗಿದೆ ಎಂಬುದು ಅಂತಿಮ ಫಲಿತಾಂಶದ ನಂತರ ತಿಳಿದು ಬರಲಿದೆ,” ಎಂದು ಬಿಜೆಪಿಯ ಚಂಡೀಗಢ ವಕ್ತಾರ ನರೇಶ್ ಅರೋರಾ ಹೇಳಿದ್ದಾರೆ.

ಕಳೆದ ಬಾರಿ ಚಂಡೀಗಢ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮತ್ತು ಅಂದು ಕೂಡ ಮಿತ್ರಪಕ್ಷ ಅಕಾಲಿದಳ ಕೇವಲ ಒಂದೇ ಸ್ಥಾನವನ್ನು ಪಡೆದುಕೊಂಡಿತ್ತು. ಬಿಜೆಪಿ-ಅಕಾಲಿದಳದ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ತನ್ನ ಸ್ಥಾನ ಗಳಿಕೆ ಹೆಚ್ಚಿಸಿಕೊಂಡಿದ್ದಷ್ಟೇ ಸಾಧನೆಯಾಗಿದೆ. ಆದರೆ ಮೊದಲ ಚುನಾವಣೆಯಲ್ಲಿಯೇ ಎಎಪಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದೆ.

ಸಾಂಪ್ರದಾಯಿಕವಾಗಿ ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಆದರೆ ಇದೀಗ ಕಾಂಗ್ರೆಸ್‌ ಸ್ಥಾನಕ್ಕೆ ಎಎಪಿ ಬಂದು ಕುಳಿತಿದ್ದು, ಇದೀಗ ಬಿಜೆಪಿ ಮತ್ತು ಎಎಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಜತೆಗೆ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್‌ ಹಾಗೂ ಅಕಾಲಿದಳ-ಬಿಎಸ್‌ಪಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಸಾಧ್ಯತೆ ಇದೆ.



Read more