ಹುಬ್ಬಳ್ಳಿ: ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ಮೂರನೇ ಅಧಿವೇಶನವು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಜ. 8 ಮತ್ತು 9ರಂದು ನಡೆಯಲಿದೆ. ಈ ಬಾರಿ ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ವಿಷಯಧಾರಿತವಾಗಿ ಅಧಿವೇಶನ ಆಯೋಜಿಸಲಾಗಿದೆ’ ಎಂದು ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಹೇಳಿದರು.
‘8ರಂದು ಬೆಳಿಗ್ಗೆ 10.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಅವರು ಅಧಿವೇಶನ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಲಿದ್ದು, ಪರಿಷದ್‌ನ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಧ್ಯಾಹ್ನ ಪುಸ್ತಕಗಳ ಬಿಡುಗಡೆ ನಡೆಯಲಿದೆ. ಸಂಜೆ ‘ಸಾಹಿತ್ಯದಲ್ಲಿ ಮೊದಲನೆಯ ಸ್ವಾತಂತ್ರ್ಯ ಹೋರಾಟ’ ವಿಷಯ ಕುರಿತು ಧಾರವಾಡದ ಹರ್ಷವರ್ಧನ ಶೀಲವಂತರ ಹಾಗೂ ‘ಸಾಹಿತ್ಯದಲ್ಲಿ ಕ್ರಾಂತಿಕಾರ್ಯ’ ಕುರಿತು ಅಂಕಣಕಾರ ರೋಹಿತ್ ಚಕ್ರತೀರ್ಥ ಮಾತನಾಡಲಿದ್ದಾರೆ. ವಿಮರ್ಶಕಿ ಡಾ. ಎನ್.ಆರ್. ಲಲಿತಾಂಬ ಅವಲೋಕ ಮಾಡಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
‘9ರಂದು ಬೆಳಿಗ್ಗೆ 9.30ಕ್ಕೆ ಕವಿಗೋಷ್ಠಿ ನಡೆಯಲಿದ್ದು, ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯ ಕವಯತ್ರಿ ಪ್ರೊ. ಸುಮಾ ವಸಂತ ಸಾವಂತ್ ಅವರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ‘ಲಾವಣಿಗಳಲ್ಲಿ ಸ್ವರಾಜ್ಯ ಕ್ರಾಂತಿ’ ಕುರಿತು ಅಂಕಣಕಾರ ಡಾ. ರೋಹಿಣಾಕ್ಷ ಶಿರ್ಲಾಲು ಮತ್ತು ‘ಕನ್ನಡ ನುಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯರು’ ಕುರಿತು ಮಂಡ್ಯದ ಇಂಗ್ಲಿಷ್ ಉಪನ್ಯಾಸಕಿ ಪವಿತ್ರಾ ಮೃತ್ಯುಂಜಯಸ್ವಾಮಿ ಮಾತನಾಡಲಿದ್ದಾರೆ. ಅಂಕಣಕಾರ ಪ್ರಭಾಕರ ಕಾರಂತ ಅವಲೋಕನ ಮಾಡಲಿದ್ದಾರೆ’ ಎಂದು ಹೇಳಿದರು.
‘ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆ ಅವರು ಸಮಾರೋಪ ಮಾತುಗಳನ್ನಾಡಲಿದ್ದಾರೆ. ಪರಿಷದ್ ಅಧ್ಯಕ್ಷ ಪ್ರೊ. ಪ್ರೇಮಶೇಖರ ಮತ್ತು ಸಾಹಿತಿ ಡಾ.ನಾ. ಮೊಗಸಾಲೆ ಉಪಸ್ಥಿತರಿರಲಿದ್ದಾರೆ’ ಎಂದು ತಿಳಿಸಿದರು.
ಪರಿಷದ್‌ನ ಜನಮೇಜಯ ಉಮರ್ಜಿ, ಗಣಪತಿ ಬೊಳಗುಂಡೆ ಹಾಗೂ ವೀಣಾ ಬರಗಿ ಇದ್ದರು.