Karnataka news paper

ಡ್ರಗ್ಸ್‌ ದಂಧೆ: ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿವೆ 11,718 ಪ್ರಕರಣ!


ಹೈಲೈಟ್ಸ್‌:

  • ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ ಡ್ರಗ್ಸ್ ದಂಧೆ
  • ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿವೆ 11,718 ಪ್ರಕರಣ!
  • ಡ್ರಗ್ಸ್ ದಂಧೆ ವಿರುದ್ಧ ಪೊಲೀಸ್ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 11,718 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಕಣ್ಣಿಟ್ಟರೂ ಈ ಅಕ್ರಮ ವ್ಯಾಪಕವಾಗಿ ಮುಂದುವರಿದಿದೆ. ಡ್ರಗ್ಸ್ ದಂಧೆಯಲ್ಲಿ ಸಿನಿಮಾ ನಟ ನಟಿಯರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಡ್ರಗ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೂ ಡ್ರಗ್ ದಂಧೆಯ ಮೂಲ ನಿಯಂತ್ರಣ ಇನ್ನೂ ಸಾಧ್ಯವಾಗಲಿಲ್ಲ.

ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು?

2018 ರಲ್ಲಿ 1030, 2019 ರಲ್ಲಿ 1661, 2020 ರಲ್ಲಿ 4062, 2021 ( ನವೆಂಬರ್) ವರೆಗೆ 4965 ಪ್ರಕರಣ ಸೇರಿ ಒಟ್ಟು 11,718 ಪ್ರಕರಣಗಳ ದಾಖಲಾಗಿವೆ. ಇನ್ನು ಮಾದಕ ವಸ್ತು ಮಾರಾಟ, ಸಾಗಾಟ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರವೂ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಡ್ರಗ್ಸ್ ಮಾಫಿಯಾ: ಚುರುಕು ಪಡೆದುಕೊಂಡ ಎನ್‌ಸಿಬಿ, ಸಿಸಿಬಿ ತನಿಖೆ

ಸರ್ಕಾರದ ಕ್ರಮಗಳೇನು?

*ಮಾದಕ ದ್ರವ ಪದಾರ್ಥಗಳ ವಹಿವಾಟನ್ನು ತಡೆಗಟ್ಟಲು ಹಾಗೂ ಪತ್ತೆಮಾಡಲು ಹಾಗೂ ಹದಿಹರೆಯದ ಯುವಕ ಮತ್ತು ಯುವತಿಯರನ್ನು ಇಂತಹ ದುಶ್ಚಟಗಳಿಂದ ತಡೆಗಟ್ಟುವ ಸಲುವಾಗಿ ಎಲ್ಲ ರೀತಿಯ ಸಾಧ್ಯವಿರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

*ಅಧಿಕಾರಿ, ಸಿಬ್ಬಂದಿಗಳಿಗೆ ಮಾದಕ ದ್ರವ್ಯ (ಡ್ರಗ್)ಗಳ ಮಾರಾಟ ಮತ್ತು ಸೇವಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಸೂಚಿಸಲಾಗಿದೆ.

*ಮಾದಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ತನಿಖಾಧಿಕಾರಿಗಳಿಗೆ ಆಯೋಜಿಸಲಾಗುತ್ತಿದೆ. ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

*ಬಾರ್ ಮತ್ತು ರೆಸ್ಟೋರೆಂಟ್, ಕಾಫಿ-ಡೇ, ಪಬ್, ಡಾನ್ಸ್‌ಬಾರ್ ಮುಂತಾದ ಯುವಕರು ಹೆಚ್ಚಾಗಿ ಸೇರುವ ಸ್ಥಳಗಳು, ಶಾಲಾ ಕಾಲೇಜು ಆವರಣ, ಬಸ್ ನಿಲ್ದಾಣ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಾದಕ ದ್ರವ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಾನೂನಿನ ರೀತಿ ಕ್ರಮ ಜರುಗಿಸಲಾಗುತ್ತಿದೆ.



Read more