ಬೆಂಗಳೂರು: ‘ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲಿಯೇ ನಂಬಿಕೆ ಇರಿಸಿದೆ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಲಾಗುತ್ತದೆ’ ಎಂದಿರುವ ಸಿದ್ದರಾಮಯ್ಯ ಅವರ ಮಾತಿಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ.
ಈ ಕುರಿತು #SidduVsDKS ಹ್ಯಾಷ್‌ಟ್ಯಾಗ್ ಹಾಕಿ ಟ್ವೀಟ್ ಮಾಡಿರುವ ಬಿಜೆಪಿ, ‘ಪರಿಷತ್ ಚುನಾವಣೆಯಲ್ಲಿ ಹಿಂದಿನದ್ದಕಿಂತ ಕೆಲವು ಸ್ಥಾನ ಕಳೆದುಕೊಂಡರೂ ರಾಜ್ಯವನ್ನೇ ಗೆದ್ದ ಸಂಭ್ರಮ ತೋರಿಸಿದ ಕಾಂಗ್ರೆಸ್ ಪರಿಸ್ಥಿತಿ ಈಗ ಅಯೋಮಯವಾಗಿದೆ. ಎರಡು ಪವರ್ ಸೆಂಟರ್ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ನಾಯಕತ್ವದ ಕುರಿತು ಶೀತಲ ಸಮರ ಆರಂಭವಾಗಿದೆ’ ಎಂದು ಹೇಳಿದೆ.
ಮತ್ತೊಂದು ಟ್ವೀಟ್‌ನಲ್ಲಿ, ‘ಕನಕಪುರ ಬಂಡೆ ಪುಡಿಯಾಗುವುದು ನಿಶ್ಚಿತವೇ? ಡಿಕೆಶಿಯ ವೇಗವನ್ನು ಸಿದ್ದರಾಮಯ್ಯಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಕೆಶಿ ಅವರು ತಾನು ಸಿಎಂ ಆಗುವ ಕನಸಿಗೆ ಪೂರಕವಾಗಿ ತಮ್ಮ ನಿಷ್ಠಾವಂತರ ಪಡೆ ಕಟ್ಟುತ್ತಿದ್ದಾರೆ. ಇದು ತನಗೆ ಮಗ್ಗುಲ ಮುಳ್ಳಾಗಬಹುದು ಎಂಬ ಭಯದಿಂದ ಸಿದ್ದರಾಮಯ್ಯ ತನ್ನ ಆಪ್ತರ ಮೂಲಕ ಡಿಕೆಶಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿ, ಗೆಲ್ಲುವವರ್ಯಾರು? ಎಂದಿದೆ.