Karnataka news paper

ಎಂಇಎಎಸ್‌ ಪುಂಡಾಟ ವಿರೋಧಿಸಿ ಬಂದ್: ಕನ್ನಡಪರ ಸಂಘಟನೆಗಳ ಒಕ್ಕೂಟ ಬೆಂಬಲ


ಹುಬ್ಬಳ್ಳಿ: ‘ಬೆಳಗಾವಿಯಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಎಸ್‌ ಹಾಗೂ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಡಿ. 31ರಂದು ಕನ್ನಡಪರ ಸಂಘಟನೆಗಳು ನೀಡಿರುವ ಬಂದ್‌ಗೆ ಉತ್ತರ ಕರ್ನಾಟಕದ ಕನ್ನಡಪರ ಸಂಘಟನೆಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಒಕ್ಕೂಟದ ಈರಣ್ಣ ಎಮ್ಮಿ ಹೇಳಿದರು.

‘ಎಂಇಎಸ್ ಸೇರಿದಂತೆ ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳು ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿವೆ. ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ವಾಹನಗಳ ಸವಾರರು ಓಡಾಡುವುದು ಕಷ್ಟವಾಗಿದೆ. ಹಾಗಾಗಿ, ಸರ್ಕಾರ ಎಂಇಎಸ್ ನಿಷೇಧಿಸಬೇಕು. ಶಿವಸೇನಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಅಂದು ಬೆಳಿಗ್ಗೆ ಚನ್ನಮ್ಮ ವೃತ್ತದಲ್ಲಿ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನಾ ಮೆರವಣಿಗೆ ಮಾಡಲಿದ್ದೇವೆ. ಎಂಇಎಸ್ ನಡೆದುಕೊಂಡರೂ, ಅದರ ವಿರುದ್ಧ ದನಿ ಎತ್ತದ ಜನಪ್ರತಿನಿಧಿಗಳ ಪ್ರತಿಕೃತಿ ದಹಿಸುತ್ತೇವೆ. ಕೋವಿಡ್‌ನಿಂದಾಗಿ ಈಗಾಗಲೇ ಜನ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಂದ್ ಮಾಡುವುದರಿಂದ ತೊಂದರೆಯಾಗುತ್ತದೆಯಾದರೂ, ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ. ಸರ್ಕಾರ ಕೇವಲ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. 31ರೊಳಗೆ ಎಂಇಎಸ್ ನಿಷೇಧಿಸುವುದಾಗಿ ಹೇಳಿದರೆ ಬಂದ್ ಕೈಬಿಡಲಾಗುವುದು’ ಎಂದು ತಿಳಿಸಿದರು.

ಒಕ್ಕೂಟದ ಕುಬೇರ ಪವಾರ, ಮಂಜುನಾಥ ಲೂತಿಮಠ, ಆನಂದ ದಲಬಂಜನ, ಮಲ್ಲಿಕಾರ್ಜುನ, ರವಿ ಕಂದ, ದೇವೇಂದ್ರಪ್ಪ ಇಟಗಿ, ಸುರೇಶನ ನಾರಾಯಣಕರ ಹಾಗೂ ಪ್ರಕಾಶ ನಾಯಕ್ ಇದ್ದರು.



Read more from source