
ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು, ಅಲ್ಲಿನ ಚುನಾವಣಾ ಆಯೋಗಗಳು ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಿದೆ.
ದೇಶದ ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗ ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಲಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ತಿಳಿಸಿದ್ದಾರೆ.
‘ಅಫ್ಗಾನಿಸ್ತಾನದ ಸದ್ಯದ ಸನ್ನಿವೇಶಕ್ಕೆ ಅವು ಅನಗತ್ಯ ಸಂಸ್ಥೆಗಳಾಗಿವೆ’ ಎಂದು ಹೇಳಿರುವ ಕರೀಮಿ, ಭವಿಷ್ಯದಲ್ಲಿ ಅವುಗಳ ಅಗತ್ಯವಿದೆ ಎನಿಸಿದರೆ, ತಾಲಿಬಾನ್ ಸರ್ಕಾರ ಪುನರ್ ಸ್ಥಾಪಿಸಲಿದೆ ಎಂದಿದ್ದಾರೆ.
ದೇಶದ ಆಡಳಿತ, ಅಧ್ಯಕ್ಷರ ಆಯ್ಕೆ, ಸಂಸತ್ ಮತ್ತು ಪ್ರಾಂತೀಯ ಚುನಾವಣೆ ಸೇರಿದಂತೆ ಎಲ್ಲ ಮಾದರಿಯ ಚುನಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗಗಳು ಅತ್ಯಗತ್ಯವಾದವುಗಳಾಗಿವೆ.
ಅಫ್ಗಾನಿಸ್ತಾನದ ಆಡಳಿತವನ್ನು ಆಗಸ್ಟ್‌ನಲ್ಲಿ ಹಿಡಿತಕ್ಕೆ ಪಡೆದಿರುವ ತಾಲಿಬಾನ್, ಈ ಬಾರಿ ಉದಾರವಾದಿ ಆಡಳಿತ ನೀಡುವುದಾಗಿ ಭರವಸೆ ನೀಡಿತ್ತು. ತಾಲಿಬಾನ್ 20 ವರ್ಷಗಳ ಹಿಂದೆ (1996–2001) ಆಡಳಿತದಲ್ಲಿದ್ದಾಗ ಹಲವು ಕಠಿಣ ನೀತಿಗಳನ್ನು ಹೇರಲಾಗಿತ್ತು.
ಹೀಗಾಗಿ ತಾಲಿಬಾನ್‌ನ ‘ಉತ್ತಮ ಆಡಳಿತದ ಭರವಸೆ’ಯ ಹೊರತಾಗಿಯೂ, ಸರ್ಕಾರಕ್ಕೆ ಔಪಚಾರಿಕ ಮನ್ನಣೆಯನ್ನು ವಿಸ್ತರಿಸಲು ಅಂತರರಾಷ್ಟ್ರೀಯ ಸಮುದಾಯ ಹಿಂದೇಟು ಹಾಕುತ್ತಿದೆ.