ಹೈಲೈಟ್ಸ್:
- ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿ
- ಸರ್ಕಾರದ ಆದೇಶಕ್ಕೆ ವ್ಯಕ್ತವಾಗುತ್ತಿದೆ ವಿರೋಧ
- 10 ರ ಬದಲಾಗಿ 11 ರ ಬದಲು ಜಾರಿಗೊಳಿಸಿ
ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿದಂತೆ ಮತ್ತಿತರ ನಿರ್ಬಂಧಗಳು ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಹೋಟೆಲ್ ಉದ್ಯಮ, ಆಟೋ, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ತಲುಗಿದ್ದಾರೆ. ಸರ್ಕಾರದ ಪರಿಹಾರವೂ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತ್ತಾಗಿದೆ.
ಓಮಿಕ್ರಾನ್ ಆತಂಕ : ಡಿಸೆಂಬರ್ 28 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ
“ನೈಟ್ ಕರ್ಫ್ಯೂ ಜಾರಿಗೊಳಿಸುವುದರಿಂದ ವೈಜ್ಞಾನಿಕವಾಗಿ ಕೋವಿಡ್ ತಡೆಯಲು ಸಾಧ್ಯವಿಲ್ಲ. ರಾತ್ರಿ ವೇಳೆ ಕೇವಲ ಶೇಕಡಾ ಐದರಿಂದ ಎಂಟರಷ್ಟು ಮಾತ್ರ ಜನಸಂದಣಿ ಇರುತ್ತದೆ.ಶೇ. 90 ರಷ್ಟು ಜನರು ಮನೆಯಲ್ಲೇ ಇರುತ್ತಾರೆ. ನೈಟ್ ಕರ್ಫ್ಯೂ ಮೂಲಕ ರಾತ್ರಿಯಲ್ಲಿ ಜನರ ಓಡಾಟಕ್ಕೆ ನಿಯಂತ್ರಣ ಹೇರಿದರೆ ಹಗಲು ಹೊತ್ತಿನಲ್ಲಿ ಜನಸಂದಣಿ ಜಾಸ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಅಗತ್ಯವಿದ್ದರೆ ರಾತ್ರಿ 10 ಗಂಟೆಯ ಬದಲಾಗಿ 11 ಗಂಟೆ ಅಥವಾ 11.30 ಯಿಂದ ಆರಂಭಿಸಿ” ಎನ್ನುತ್ತಾರೆ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ ರಾವ್.
ಕೋವಿಡ್ ಲಾಕ್‌ಡೌನ್ ಕಾರಣದಿಂದ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಸದ್ಯ ಹೋಟೆಲ್ ಉದ್ಯಮ ಚೇತರಿಕೆ ಕಾಣುತ್ತಿದೆ. ಇದೀಗ ಮತ್ತೆ ನೈಟ್ ಕರ್ಪ್ಯೂಯಿಂದಾಗಿ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದೆ ಎನ್ನುತ್ತಾರೆ ಅವರು.
ಇನ್ನು ಜನಸಾಮಾನ್ಯರು ಕೂಡಾ ನೈಟ್ ಕರ್ಪ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾತ್ರಿ ಹತ್ತರಿಂದ ಜನರ ಓಡಾಟಕ್ಕೆ ನಿಯಂತ್ರಣ ಹೇರುವ ಅಗತ್ಯ ಏನಿದೆ? ಹಗಲು ಜನಸಂದನಿ ಹೆಚ್ಚಿರುತ್ತದೆ. ರಾತ್ರಿ ವೇಳೆ ಜನರ ಓಡಾಟ ಕಡಿಮೆ. ಹೀಗಿರುವಾಗ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ನೈಟ್ ಕರ್ಫ್ಯೂ ಅಗತ್ಯ ಏನಿದೆ? ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ನಿವಾಸಿ ಪ್ರಮೋದ್.
ಪೊಲೀಸರಿಂದ ವಸೂಲಿ ಆರೋಪ!
ಇನ್ನು ನೈಟ್ ಕರ್ಫ್ಯೂ ಜಾರಿ ಹೆಸರಿನಲ್ಲಿ ಕೆಲವು ಪೊಲೀಸರು ಹೋಟೆಲ್, ಬಾರ್, ಪಬ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. 10 ಗಂಟೆಯಿಂದ ನೈಟ್ ಕರ್ಫ್ಯೂ ಇದ್ದರೂ ಒಂಬತ್ತು ಗಂಟೆಯಿಂದಲೇ ಪೊಲೀಸರು ಅಂಗಡಿ ಮುಚ್ಚಲು ಸೂಚನೆ ನೀಡುತ್ತಾರೆ. ಇನ್ನು ಅಂಗಡಿ, ಹೋಟೆಲ್ ಮುಚ್ಚಿದರೂ ಕೆಲಸಗಾರರು ಮನೆಗೆ ಹೋಗುವ ಸಂದರ್ಭದಲ್ಲೂ ಪೊಲೀಸರ ಕಿರಿಕಿರಿ ಎದುರಿಸಬೇಕಾಗುತ್ತದೆ. ಕೆಲವು ಬಾರ್ ಹಾಗೂ ರೆಸ್ಟೋರೆಂಟ್, ಪಬ್‌ಗಳು 11 ರ ವರೆಗೂ ತೆರೆದಿರುತ್ತದೆ. ಹಣ ವಸೂಲಿ ಮಾಡಿ ಪಬ್, ಬಾರ್ ತೆರೆದಿಡಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.