‘ಯಾವ ಲಸಿಕೆ ನೀಡಬೇಕು ಎನ್ನುವ ಕುರಿತು ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಹೊಸ ಲಸಿಕೆಯ ಡೋಸ್, ವ್ಯಕ್ತಿಯಲ್ಲಿನ ಪ್ರತಿಕಾಯಗಳನ್ನು ತುಂಬ ಪರಿಣಾಮಕಾರಿಯಾಗಿ ಓಮಿಕ್ರಾನ್ ವಿರುದ್ಧ ಹೋರಾಡಲು ಸಜ್ಜುಗೊಳಿಸುವ ನಿರೀಕ್ಷೆ ವಿಜ್ಞಾನಿಗಳದ್ದಾಗಿದೆ’ ಎಂದು ಅವರು ತಿಳಿಸಿದ್ದಾರೆ. ಜ.3ರಿಂದ 15ರಿಂದ 18 ವರ್ಷದೊಳಗಿನ ಮಕ್ಕಳು ಹಾಗೂ ಜ.10ರಿಂದ ಮುಂಚೂಣಿ ಕಾರ್ಯಕರ್ತರು, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ‘ಮುಂಜಾಗ್ರತೆ ಡೋಸ್’ ನೀಡುವ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಾಡಿದ್ದಾರೆ. 9ರಿಂದ 12 ತಿಂಗಳ ಅಂತರ ವೈದ್ಯಕೀಯ ಸೇವಾ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ 2ನೇ ಡೋಸ್ ಪಡೆದ 9 ರಿಂದ 12 ತಿಂಗಳ ಅವಧಿಯ ಬಳಿಕ ಮುಂಜಾಗ್ರತೆ ಡೋಸ್ ನೀಡಲು ಸರಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಓಮಿಕ್ರಾನ್ ಸೋಂಕು ಹೆಚ್ಚಳದ ನಡುವೆ ಮೂರನೇ ಅಲೆಯ ಭೀತಿ ಆವರಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 3ನೇ ಡೋಸ್ ಅಥವಾ ಮುಂಜಾಗ್ರತೆ ಡೋಸ್ ನೀಡಲು ಸರಕಾರ ನಿರ್ಧರಿಸಿದೆ. 2ನೇ ಡೋಸ್ ಮತ್ತು ಮುಂಜಾಗ್ರತೆ ಡೋಸ್‌ಗಳ ನಡುವಿನ ಅಂತರದ ಬಗ್ಗೆ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಎಜಿಐ) ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಬಳಿಕ ಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ರೂಪುರೇಷೆ ಸಿದ್ಧಗೊಳ್ಳಲಿದೆ. ಈವರೆಗೆ ಒಟ್ಟು 142 ಕೋಟಿ ಡೋಸ್ ಲಸಿಕೆಯನ್ನು ದೇಶಾದ್ಯಂತ ನೀಡಲಾಗಿದ್ದು, ಆ ಪೈಕಿ ಯುವ ಸಮುದಾಯದ ಶೇ. 61ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಜತೆಗೆ, ಒಂದು ಡೋಸ್ ಪೂರ್ಣಗೊಳಿಸಿರುವ ಯುವ ಸಮುದಾಯದ ಪ್ರಮಾಣ 90%ರಷ್ಟಿದೆ. 20 ಕಾಯಿಲೆಗಳ ಪಟ್ಟಿ ಕೋವಿಡ್-19 ಬೂಸ್ಟರ್ ಅಥವಾ ಮುಂಜಾಗ್ರತೆ ಡೋಸ್‌ಗಳನ್ನು ಪಡೆಯಲು ಅರ್ಹರಾದ 60 ವರ್ಷಗಳಿಗೂ ಮೇಲ್ಪಟ್ಟವರು ವೈದ್ಯಕೀಯ ಪ್ರಮಾಣಪತ್ರವನ್ನು ಡೋಸ್ ಪಡೆಯುವ ವೇಳೆ ಸಲ್ಲಿಸುವುದು ಕಡ್ಡಾಯವಾಗಲಿದೆ.
ಒಟ್ಟು 20 ಮಾರಣಾಂತಿಕ ಅಥವಾ ಗಂಭೀರ ಅನಾರೋಗ್ಯಗಳ ಪಟ್ಟಿಯನ್ನು ತಯಾರಿಸಲಾಗಿದೆ. ‘ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ತಜ್ಞರಿಂದ ಮುಂಜಾಗ್ರತೆ ಡೋಸ್‌ಗೆ ಶಿಫಾರಸಿನ ಪ್ರಮಾಣಪತ್ರ ಅಥವಾ ಮೆಡಿಕಲ್ ಸರ್ಟಿಫಿಕೇಟ್ ಪಡೆಯಬೇಕಿದೆ. ಅದನ್ನು ಲಸಿಕೆ ನೀಡುವಿಕೆ ಕೇಂದ್ರದಲ್ಲಿ ಸಲ್ಲಿಸಬೇಕಾಗಬಹುದು. ಅದನ್ನು ಕೋವಿನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಆರ್.ಎಸ್. ಶರ್ಮಾ ತಿಳಿಸಿದ್ದಾರೆ. ‘ಓಮಿಕ್ರಾನ್ ಸೋಂಕು ತಗುಲುವ ಭಯದಿಂದ ಅನೇಕ ವೃದ್ಧರು ಸ್ವಯಂಪ್ರೇರಿತವಾಗಿ ಲಸಿಕೆ ಕೇಂದ್ರಗಳಿಗೆ ದೌಡಾಯಿಸಬಾರದು. ಅವರ ದೇಹ ಸ್ಥಿತಿಯ ಬಗ್ಗೆ ಆಪ್ತ ವೈದ್ಯರಿಂದ ಸಾಮಾನ್ಯ ಪರಿಶೀಲನೆ ಮಾಡಿಸಿಕೊಂಡು, ಬಳಿಕ ಮುಂಜಾಗ್ರತೆ ಡೋಸ್‌ಗೆ ಶಿಫಾರಸು ಪತ್ರ ಅಥವಾ ಸರ್ಟಿಫಿಕೇಟ್ ಪಡೆದುಕೊಂಡು ಬರುವುದು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು, ಮಕ್ಕಳು ಅಂದರೆ 15-18 ವರ್ಷದವರು ಲಸಿಕೆ ಪಡೆಯಲು ಕೋವಿನ್ ವೆಬ್‌ಸೈಟ್‌ನಲ್ಲಿಪೂರ್ವ ನೋಂದಣಿಯು ಹಿಂದಿನ ವ್ಯವಸ್ಥೆಯಂತೆಯೇ ಇರಲಿದೆ ಎಂದು ತಿಳಿಸಿದ್ದಾರೆ.