Source : UNI
ಚೆನ್ನೈ: ತಮಿಳುನಾಡಿನ ಕೂನೂರು ನೀಲಗಿರಿ ಬೆಟ್ಟಗಳಲ್ಲಿ ಬುಧವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ಅಪಘಾತಕ್ಕೆ ಪ್ರತಿಕೂಲ ಹವಾಮಾನ ಅಥವಾ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಮಾಜಿ ಎಂ ಐ-17 ಪೈಲಟ್ ಅಮಿತಾಭ್ ರಂಜನ್ ಹೇಳಿದ್ದಾರೆ. ಪತನಗೊಂಡ ಸೇನಾ ಹೆಲಿಕಾಪ್ಟರ್ ಅನ್ನು ಎಂ ಐ-17ವಿ 5 ಎಂದು ಗುರುತಿಸಲಾಗಿದ್ದು, ಈ ಹೆಲಿಕಾಪ್ಟರ್ ಭಾರತೀಯ ಸೇನೆಯಲ್ಲಿ ಅತ್ಯಂತ ವೈಶಿಷ್ಟ್ಯ ಹೊಂದಿದೆ.
ಇದನ್ನು ಓದಿ: ಸೇನಾ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು
ಎಂಐ -17 ವಿ5 ಭಾರತೀಯ ವಾಯು ಪಡೆ ಬಳಸುತ್ತಿರುವ ಅತ್ಯಾಧುನಿಕ ಸಾರಿಗೆ ಹೆಲಿಕಾಪ್ಟರ್ ಆಗಿದೆ. ಇದು ಎಂಐ -8/17 ಗುಂಪಿನ ಸೇನಾ ವಿಮಾನವಾಗಿದೆ. ರಷ್ಯಾದ ಹೆಲಿಕಾಪ್ಟರ್‌ಗಳ ಅಂಗಸಂಸ್ಥೆಯಾದ ಕಜನ್ ಹೆಲಿಕಾಪ್ಟರ್ಸ್ ಅಭಿವೃದ್ಧಿಪಡಿಸಿದೆ. ಭದ್ರತಾ ಪಡೆಗಳ ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಗಸ್ತು ಕರ್ತವ್ಯ, ಭದ್ರತಾ ಕಾರ್ಯಾಚರಣೆಗಳಲ್ಲಿ ಇದನ್ನು ಬಳಸಲಾಗುತ್ತದೆ.
ರಷ್ಯಾದ ರೊಸೊಬೊರೊನೆಕ್ಸ್‌ಪೋರ್ಟ್ 2008 ರಲ್ಲಿ ಭಾರತ ಸರ್ಕಾರದೊಂದಿಗೆ 80 ಎಂಐ -17ವಿ 5 ಹೆಲಿಕಾಪ್ಟರ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದ್ದು, 2013 ರಲ್ಲಿ ಪೂರ್ಣಗೊರ್ಣಗೊಳಿಸಿದೆ. 2013ರ ಆರಂಭದವರೆಗೆ ಒಟ್ಟು 36 ಹೆಲಿಕಾಪ್ಟರ್‌ಗಳನ್ನು ಪೂರೈಸಿದೆ. ಭಾರತೀಯ ವಾಯುಪಡೆಗೆ 71 ಎಂಐ -17ವಿ 5 ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ 2012-13ರಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಎಂಐ – 17 ವಿ 5 ವೈಶಿಷ್ಟ್ಯಗಳು
ಬಲಿಷ್ಟ ತಾಂತ್ರಿಕ ಸಾಮರ್ಥ್ಯ
ಭಾರೀ ಸಾರಿಗೆ ಹೆಲಿಕಾಪ್ಟರ್
ಒಂದು ಬಾರಿಗೆ 36 ಮಂದಿಯನ್ನು ಕೊಂಡೊಯ್ಯಬಹುದು.
ವಿಐಪಿ ಚಾಪರ್ ಆಗಿ ಬಳಕೆ
ಹಿಮಾಲಯದಂತಹ ಪ್ರತಿಕೂಲ ಸನ್ನಿವೇಶಗಳಲ್ಲಿ ಹಾರಾಟಕ್ಕೆ ಅನುಕೂಲ
ಭಾರತೀಯ ಸೇನೆ 150 ಎಂಐ -17 ಹೆಲಿಕಾಪ್ಟರ್‌ಗಳನ್ನು ಹೊಂದಿದೆ
ಗಂಟೆಗೆ 225- 250 ಕಿ.ಮೀ. ವೇಗದಲ್ಲಿ ಪ್ರಯಾಣ
6000 ಮೀ ಎತ್ತರದಲ್ಲಿ 465 ಕಿಮೀ ನಿರಂತರ ಪ್ರಯಾಣ
ಗರಿಷ್ಠ 13,000 ಕೆಜಿ ಟೇಕಾಫ್ ಭಾರ ಹೊತ್ತೊಯ್ಯಬಹುದು.
ಮರುಭೂಮಿಯಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ.