ಹೈಲೈಟ್ಸ್:
- ಸೆಮಿಕಂಡಕ್ಟರ್ ಚಿಪ್‌ಗಳ ಭಾರೀ ಕೊರತೆಯಿಂದ ಇಡೀ ವಿಶ್ವವೇ ತತ್ತರ
- ಭಾರತವನ್ನು ಎಲೆಕ್ಟ್ರಾನಿಕ್ಸ್ ಹಬ್ ಆಗಿಸಲು ಕೇಂದ್ರ ಸರಕಾರದಿಂದ ಮಹತ್ವದ ಯೋಜನೆ
- ಸೆಮಿಕಂಡಕ್ಟರ್ ಕಂಪನಿಗಳಿಗೆ ಬರೋಬ್ಬರಿ 76,000 ಕೋಟಿ ರೂಪಾಯಿ ಪ್ರೋತ್ಸಾಹ ಧನ
ವಿವಿಧ ‘ಉತ್ಪಾದನೆ ಆಧಾರಿತ ಪ್ರೋತ್ಸಾಹ’ (PLI) ಯೋಜನೆಗಳ ಮೂಲಕ, ದೇಶದ ಉತ್ಪಾದನೆ ಮತ್ತು ರಫ್ತು ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಸೆಮಿಕಂಡಕ್ಟರ್ ನೀತಿಯು ಭಾರತದ ಉತ್ಪಾದನಾ ವಲಯವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಡಿಸ್‌ಪ್ಲೇ ತಯಾರಿಕೆಗೆ ಒಂದರಿಂದ ಎರಡು ಫ್ಯಾಬ್ ಘಟಕಗಳು ಮತ್ತು ಬಿಡಿಭಾಗಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು ತಲಾ 10 ಘಟಕಗಳನ್ನು ತೆರೆಯಲು ಸರಕಾರ ಯೋಜಿಸುತ್ತಿದೆ. ಆಟೋಮೊಬೈಲ್‌ಗಳಿಂದ ಹಿಡಿದು ಮೊಬೈಲ್ ಹ್ಯಾಂಡ್‌ಸೆಟ್‌ಗಳವರೆಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ತಯಾರಿಸಲು ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ.
ಈ ಮಹತ್ವದ ಯೋಜನೆಯು ಮುಂದಿನ ವಾರ ಕೇಂದ್ರ ಸಂಪುಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ಕುರಿತು ಸ್ಪಷ್ಟ ವಿವರಗಳನ್ನು ರೂಪಿಸಲಿದೆ.
ಕ್ಯಾಬಿನೆಟ್ ಅನುಮೋದನೆಯ ನಂತರ, ಸೆಮಿಕಂಡಕ್ಟರ್ ನೀತಿಗೆ ಅಂತಿಮ ರೂಪ ದೊರೆಯಲಿದೆ. ಈ ನಂತರವೇ ಕಂಪನಿಗಳಿಗೆ ಹೂಡಿಕೆ ಮಾಡಲು ಆಹ್ವಾನಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಭಾರತವು ತ್ವರಿತ ನಿರ್ಧಾರ ಕೈಗೊಳ್ಳಬೇಕು
ತಜ್ಞರು ಹೇಳುವಂತೆ ಭಾರತವು ಸೆಮಿಕಂಡಕ್ಟರ್ ವಲಯಕ್ಕೆ ಸಂಬಧಿಸಿದಂತೆ ವೇಗವಾಗಿ ಕಾರ್ಯನಿರ್ವಹಿಸಬೇಕು. ಬಹುತೇಕ ಎಲ್ಲಾ ಕೈಗಾರಿಕೆಗಳ ಉತ್ಪಾದನಾ ಗುರಿಗಳ ಮೇಲೆ ಪರಿಣಾಮ ಬೀರುವ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಿಂದ ಈಡೀ ವಿಶ್ವವೇ ತತ್ತರಿಸುತ್ತಿದೆ. ಕಾರುಗಳಿಂದ ಹಿಡಿದು ಟಿವಿ, ಲ್ಯಾಪ್‌ಟಾಪ್, ಇಯರ್‌ಬಡ್ಸ್ ಮತ್ತು ವಾಷಿಂಗ್ ಮೆಷಿನ್‌ಗಳವರೆಗೆ ಎಲ್ಲ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲೂ ಸೆಮಿಕಂಡಕ್ಟರ್‌ಗಳನ್ನು ಬಳಸುವುಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಸರಿಯಾದ ಸಮಯಕ್ಕೆ ಸೆಮಿಕಡಕ್ಟರ್ ನೀತಿ ಬರುತ್ತಿದೆ ಮತ್ತು ಭಾರತ ಇದಕ್ಕೆ ಸರಿಯಾದ ಸ್ಥಳ” ಎಂದು ಗಾರ್ಟ್ನರ್‌ನ ಪ್ರಧಾನ ಸಂಶೋಧನಾ ವಿಶ್ಲೇಷಕ ಕನಿಷ್ಕಾ ಚೌಹಾನ್ ಅಭಿಪ್ರಾಯಪಟ್ಟಿದ್ದಾರೆ.
ಭಾರೀ ಹೂಡಿಕೆ ಅಗತ್ಯ:
ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆಯು 5-10 ಶತಕೋಟಿ ಡಾಲರ್ (37-74 ಸಾವಿರ ಕೋಟಿ ರೂ.) ಹೂಡಿಕೆಯ ಅಗತ್ಯವಿದೆ. ಭಾರತ ಸದ್ಯಕ್ಕೆ ತನ್ನ ಬೇಡಿಕೆಯನ್ನು ಬಗೆಹರಿಸಲು ಬಹುತೇಕ ಆಮದನ್ನು ಅವಲಂಬಿಸಿದೆ.
ಚಿಪ್ ವಿನ್ಯಾಸದಲ್ಲಿ ಭಾರತ ಯಶಸ್ಸು:
ಸೆಮಿ ಕಂಡಕ್ಟರ್ ಚಿಪ್‌ಗಳ ವಿನ್ಯಾಸದಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೆ ಉತ್ಪಾದನೆಯಲ್ಲಿ ಹಿಂದುಳಿದಿದೆ. ಚಿಪ್ ವಿನ್ಯಾಸಕಾರರಿಗೆ ಇಲ್ಲಿ ಕೊರತೆ ಇಲ್ಲ. ಆದರೆ ಪ್ರೊಸೆಸ್ ಎಂಜಿನಿಯರ್‌ಗಳ ಕೊರತೆ ಇದೆ. ಸ್ಥಿರವಾದ ಹಾಗೂ ಸಾಕಷ್ಟು ವಿದ್ಯುತ್ ಪೂರೈಕೆ, ಮೂಲಸೌಕರ್ಯಗಳೂ ಅಗತ್ಯವಿದೆ. ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪ ಯಡವಟ್ಟಾದರೂ ಚಿಪ್ ತಯಾರಿಕೆಯ ಕೇಂದ್ರಕ್ಕೆ ಸಮಸ್ಯೆಯಾಗುತ್ತದೆ.
ಹೀಗಿದ್ದರೂ ಕೋವಿಡ್ -19 ಬಿಕ್ಕಟ್ಟಿನ ನಂತರ ಹಲವಾರು ಕಂಪನಿಗಳು ಚೀನಾದಿಂದ ಹೊರಗೆ ಉತ್ಪಾದನೆ ಮತ್ತು ಹೂಡಿಕೆಗೆ ನಿರ್ಧರಿಸುತ್ತಿದ್ದು, ಭಾರತಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ರಕ್ಷಣೆ, ಆಟೊಮೊಬೈಲ್, ಬಾಹ್ಯಾಕಾಶ, 5ಜಿ ಮೊದಲಾದ ತಂತ್ರಜ್ಞಾನ ಬೆಳೆಯುತ್ತಿದೆ. ಹೀಗಾಗಿ ಇಲ್ಲಿಯೇ ಸೆಮಿಕಂಡಕ್ಟರ್ ಉತ್ಪಾದನೆಯ ಅವಶ್ಯಕತೆಯೂ ಹೆಚ್ಚಿದೆ.
ಸೆಮಿಕಂಡಕ್ಟರ್ ಘಟಕಕ್ಕೆ ಟಾಟಾ ಹೂಡಿಕೆ?
ಟಾಟಾ ಸಮೂಹವು ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕ ಸ್ಥಾಪಿಸಲು 300 ದಶಲಕ್ಷ ಡಾಲರ್ (ಅಂದಾಜು 2,220 ಕೋಟಿ ರೂ.) ಹೂಡಿಕೆ ಮಾಡಲು ನಿರ್ಧರಿಸಿದೆ. ಹಾಗೂ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಸರಕಾರದ ಜತೆ ಈ ಸಂಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಟಾಟಾ ಸಮೂಹವು ಸೆಮಿಕಂಡಕ್ಟರ್ ಬಿಸಿನೆಸ್‌ಗೆ ಪದಾರ್ಪಣೆ ಮಾಡುವುದಾಗಿ ತಿಳಿಸಿತ್ತು.