Karnataka news paper

‘ಒಂದು ಹೆಜ್ಜೆ ಹಿಂದೆ ಹೋಗಿರಬಹುದು, ಆದರೆ ಮತ್ತೆ ಮುನ್ನುಗ್ಗುತ್ತೇವೆ’: ಕೃಷಿ ಕಾಯ್ದೆ ಕುರಿತು ಕೇಂದ್ರ ಸಚಿವ ಅಚ್ಚರಿಯ ಹೇಳಿಕೆ



‘ಒಂದು ಹೆಜ್ಜೆ ಹಿಂದೆ ಹೋಗಿರಬಹುದು, ಆದರೆ ಮತ್ತೆ ಮುನ್ನುಗ್ಗುತ್ತೇವೆ’: ಕೃಷಿ ಕಾಯ್ದೆ ಕುರಿತು ಕೇಂದ್ರ ಸಚಿವ ಅಚ್ಚರಿಯ ಹೇಳಿಕೆ

ನರೇಂದ್ರ ಸಿಂಗ್ ತೋಮರ್

Online Desk

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನು ಪುನಃ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಸಿಂಗ್ ತೋಮರ್ ಅವರು, ‘ಕೃಷಿ ಕಾಯ್ದೆ ವಿಚಾರವಾಗಿ ಒಂದು ಹೆಜ್ಜೆ ಹಿಂದೆ ಹೋಗಿರಬಹುದು. ಆದರೆ ಮತ್ತೆ ಮುನ್ನುಗ್ಗುತ್ತೇವೆ ಎಂದು ಹೇಳಿದ್ದಾರೆ.

‘ಕೃಷಿ ಕಾನೂನುಗಳ ರದ್ದತಿಗೆ “ಕೆಲವು ಜನರು ಕಾರಣ”. ಸಂಸತ್ತಿನಲ್ಲಿ ಚರ್ಚೆಯ ಕೊರತೆಯೊಂದಿಗೆ ಆ ಮಹತ್ವದ ಕಾಯ್ದೆಗಳನ್ನು ರದ್ದುಗೊಳಿಸಲಾಯಿತು. ದೇಶಕ್ಕೆ ಸ್ವತಂತ್ರ್ಯ ಬಂದ 70 ವರ್ಷಗಳ ಬಳಿಕ ಕೃಷಿ ವಿಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕಾನೂನು ತರಲು ಮುಂದಾಗಿತ್ತು. ಇದು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿಡಿಸಲಿಲ್ಲ. ಹೀಗಾಗಿ ಕಾಯ್ದೆಗಳ ಕುರಿತು ಅಪಪ್ರಚಾರ ಮಾಡಿ ಅವುಗಳ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು. ಆದರೆ ಅವರಿಗೆ ನೆನಪಿರಲಿ.. ಸರ್ಕಾರ ಇದರಿಂದ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರಬಹುದು. ಆದರೆ ಅದಕ್ಕಿಂತ ವೇಗದಲ್ಲಿ ಮತ್ತೆ ಮುನ್ನುಗ್ಗುತ್ತೇವೆ.  ನಾವು ಖಂಡಿತಾ ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ದೇಶದ ಬೆನ್ನೆಲುಬು ಎಂದು ಹೇಳಿದರು. 

‘ರೈತರ ಅನುಕೂಲಕ್ಕಾಗಿ ನಾವು ಒಂದು ಹೆಜ್ಜೆ ಹಿಂದೆ ಇರಿಸಿದ್ದೇವೆ. ಭವಿಷ್ಯದಲ್ಲಿ ಮತ್ತೆ ಮುಂದಕ್ಕೆ ತೆರಳಲಿದ್ದೇವೆ. ಕೃಷಿ ಕಾನೂನುಗಳಲ್ಲಿ ಅಲ್ಪ ಬದಲಾವಣೆಗಳೊಂದಿಗೆ ಮತ್ತೆ ತರಲಿದ್ದೇವೆ ಎಂದು ತೋಮರ್ ಘೋಷಿಸಿದ್ದಾರೆ. 

ಕೇಂದ್ರ ಕೃಷಿ ಸಚಿವ ತೋಮರ್ ನೀಡಿರುವ ಹೇಳಿಕೆ ಕಳವಳ ಉಂಟುಮಾಡಿದ್ದು, ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ವರ್ಷದಿಂದ ನಿರಶನ ನಡೆಸುತ್ತಿದ್ದ ರೈತರು ವಾರದ ಹಿಂದಷ್ಟೇ ತಮ್ಮ ಶಿಬಿರಗಳನ್ನು ಖಾಲಿ ಮಾಡಿ ತೆರಳಿದ್ದರು. ಈ ಕ್ರಮದಲ್ಲಿ ಕೇಂದ್ರ ಸಚಿವ ತೋಮರ್‌ ಹೇಳಿಕೆ ಸಂಚಲನ ಮೂಡಿಸಿದೆ.
 






    Read more