Karnataka news paper

ಪುನೀತ್ ಪ್ರೇರಣೆ: ಭಟ್ಕಳದಲ್ಲಿ 2,500ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೋಂದಣಿ..!


ಹೈಲೈಟ್ಸ್‌:

  • ಭಟ್ಕಳದ ಸ್ಪಂದನ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ನೇತ್ರದಾನ ನೋಂದಣಿ ಶಿಬಿರ
  • ಸ್ಥಳೀಯ 20ಕ್ಕೂ ಹೆಚ್ಚು ಸಂಘ – ಸಂಸ್ಥೆಗಳು ಸಹಕಾರ ನೀಡಿದ್ದವು
  • ಉಡುಪಿಯ ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ಸಹಯೋಗದೊಂದಿಗೆ ನಡೆದ ಶಿಬಿರ

ಉತ್ತರ ಕನ್ನಡ: ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ರಾಜ್ಯದ ವಿವಿಧೆಡೆ ನೇತ್ರದಾನಕ್ಕಾಗಿ ನೋಂದಣಿ ಹೆಚ್ಚಾಗಿದೆ. ಅದರಂತೆ ದಿ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ, ‘ಕಣ್ಣುಗಳನ್ನು ದಾನ ಮಾಡಿ, ದೃಷ್ಟಿಯನ್ನು ಕೊಡುಗೆಯಾಗಿ ನೀಡಿ’ ಎಂಬ ಅವರದ್ದೇ ಹೇಳಿಕೆಯನ್ನೇ ಘೋಷ ವಾಕ್ಯವನ್ನಾಗಿಸಿಕೊಂಡು ಭಟ್ಕಳದಲ್ಲಿ ಹಮ್ಮಿಕೊಂಡಿದ್ದ ಬೃಹತ್ ನೇತ್ರದಾನ ನೋಂದಣಿ ಶಿಬಿರದಲ್ಲಿ 2,500ಕ್ಕೂ ಅಧಿಕ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗುವ ವಾಗ್ದಾನ ಮಾಡಿದ್ದಾರೆ.

ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಭಟ್ಕಳದ ಸ್ಪಂದನ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಈ ನೇತ್ರದಾನ ನೋಂದಣಿ ಶಿಬಿರಕ್ಕೆ ಸ್ಥಳೀಯ 20ಕ್ಕೂ ಹೆಚ್ಚು ಸಂಘ – ಸಂಸ್ಥೆಗಳು ಸಹಕಾರ ನೀಡಿದ್ದವು. ಉಡುಪಿಯ ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ಸಹಯೋಗದೊಂದಿಗೆ ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಈ ನೋಂದಣಿ ಕಾರ್ಯ ನಡೆಯಿತು.

ಅನೇಕ ಸಂಘ – ಸಂಸ್ಥೆಗಳು, ಯುವಕ – ಯುವತಿಯರು ಗುಂಪು ಗುಂಪಾಗಿ ಬಂದು ನೋಂದಾಯಿಸಿದರೆ, ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯ ಯುವಕ – ಯುವತಿಯರು ಈ ಶಿಬಿರದಲ್ಲಿ ಕುಟುಂಬ ಸಮೇತರಾಗಿ ಹೆಸರು ನೋಂದಣಿ ಮಾಡಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಮಿನಿ ಸ್ಮಾರಕ ನಿರ್ಮಾಣ, ಸಂತೆ ಮಾರುಕಟ್ಟೆಗೂ ಅಪ್ಪು ಹೆಸರು
ಇನ್ನು ಈ ಶಿಬಿರವನ್ನ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು. ಸ್ಪಂದನ ಸೇರಿದಂತೆ ಇನ್ನಿತರ ಸಂಸ್ಥೆಗಳು ಈ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸರ್ಕಾರ ಮಾಡಬೇಕಾದ ಕಾರ್ಯವನ್ನ ಸಂಘ – ಸಂಸ್ಥೆಗಳು ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂಥದ್ದು ಎಂದರು.

ಪುನೀತ್ ರಾಜ್‌ಕುಮಾರ್ ನೇತ್ರದಾನ: ಶಸ್ತ್ರಚಿಕಿತ್ಸೆ ಮೂಲಕ ಇಬ್ಬರಿಗೆ ಅಪ್ಪು ಕಣ್ಣಗಳ ಅಳವಡಿಕೆ
ಈ ಕಾರ್ಯಕ್ರಮದಲ್ಲಿ ಕೇವಲ ನೇತ್ರದಾನಕ್ಕೆ ನೋಂದಣಿಯಷ್ಟೇ ಅಲ್ಲ, ಶಿಬಿರದಲ್ಲಿ ನೇತ್ರ ತಪಾಸಣಾ ಕಾರ್ಯವೂ ನಡೆದಿದೆ. ಪ್ರಸಾದ್ ನೇತ್ರಾಲಯದ ತಜ್ಞರು ಕಣ್ಣಿನ ಪರೀಕ್ಷಾ ಕಾರ್ಯ ನಡೆಸಿದರು. ಸುಮಾರು 250 ಮಂದಿ ಇಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 60 ಮಂದಿಗೆ ಕನ್ನಡಕ ವಿತರಿಸಲಾಗಿದೆ. ಇನ್ನು 39 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಒಟ್ಟಾರೆ ಈ ಮೊದಲೆಲ್ಲಾ ನೇತ್ರದಾನದ ಕುರಿತಾಗಿ ಇದ್ದ ಮೂಢನಂಬಿಕೆಗಳು ಮರೆಯಾಗಿ, ಡಾ. ರಾಜ್ ಕುಟುಂಬ ಮಾಡಿದ ಸಾಮಾಜಿಕ ಕಾರ್ಯವೀಗ ಲಕ್ಷಾಂತರ ಅಂಧರ ಬಾಳಲ್ಲಿ ಬೆಳಕು ತರಲು ಹಲವರಿಗೆ ಪ್ರೇರಣೆಯಾಗಿರುವುದಂತೂ ಸತ್ಯ.

ಪುನೀತ್ ರಾಜ್‌ಕುಮಾರ್ ಪ್ರೇರಣೆ: ಚಿತ್ರದುರ್ಗದಲ್ಲಿ ನೇತ್ರದಾನಕ್ಕೆ ಈವರೆಗೂ 2 ಸಾವಿರ ಅರ್ಜಿಗೆ ಸಹಿ..!

eye donation

ಪುನೀತ್ ಪ್ರೇರಣೆ: ಭಟ್ಕಳದಲ್ಲಿ 2,500ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೋಂದಣಿ..!



Read more