Karnataka news paper

ಹೆಲಿಕಾಪ್ಟರ್ ದುರಂತದಲ್ಲಿ ಜ. ಬಿಪಿನ್ ರಾವತ್ ಸಾವು: ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಜ್ಯಪಾಲರು ಸೇರಿ ಹಲವು ಗಣ್ಯರ ಸಂತಾಪ


Source : Online Desk

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ.

ಭಾರತದ ಮೂರು ಸೇನಾ ಪಡೆಗಳ ಮೊದಲ ಮುಖ್ಯಸ್ಥ ರಾವತ್ ನಿಧನಕ್ಕೆ ಸಂತಾಪಗಳ ಮಹಾಪೂರವೇ ಹರಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ:  ಸೇನಾ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು

ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ನಾವು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸಶಸ್ತ್ರ ಪಡೆಗಳ ಇತರ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಅವರು ಭಾರತಕ್ಕೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಜನರಲ್ ಬಿಪಿನ್ ರಾವತ್ ಒಬ್ಬ ಅತ್ಯುತ್ತಮ ಯೋಧ. ನಿಜವಾದ ದೇಶಭಕ್ತ, ಅವರು ನಮ್ಮ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಉಪಕರಣಗಳನ್ನು ಆಧುನೀಕರಿಸುವಲ್ಲಿ ಮಹತ್ತರವಾಗಿ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರದ ವಿಷಯಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿವೆ. ಅವರ ಅಗಲಿಕೆ ನನಗೆ ಅತೀವ ದುಃಖ ತಂದಿದೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಸೇನಾ ಪಡೆಯ ಇತರ ಸಿಬ್ಬಂದಿಗಳು ಮೃತಪಟ್ಟಿರುವುದು ಆಘಾತದ ಸಂಗತಿಯಾಗಿದ್ದು, ರಾಷ್ಟ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇಶದ ರಕ್ಷಣಾ ವಲಯಕ್ಕೆ ಸಿಡಿಎಸ್ ರಾವತ್ ಅವರ ಕೊಡುಗೆ, ನಿಸ್ವಾರ್ಥ ಸೇವೆ ಸ್ಮರಣೀಯ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.

ಇನ್ನು ಬಿಪಿನ್ ರಾವತ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಜನರಲ್ ರಾವತ್, ಅವರ ಪತ್ನಿ ಹಾಗೂ ಇತರ ಸೇನಾ ಸಿಬ್ಬಂದಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಈ ಆಘಾತವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.





Read more

Leave a Reply

Your email address will not be published. Required fields are marked *